ಕುಪ್ವಾರ ಕಸ್ಟಡಿ ಕಿರುಕುಳ ಪ್ರಕರಣ: ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್
ಪೊಲೀಸ್ ಪೇದೆಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಪೊಲೀಸ್ ಪೇದೆ ಖುರ್ಷಿದ್ ಅಹ್ಮದ್ ಚೋಹಾನ್ ಎಂಬವರಿಗೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿನ ಜಂಟಿ ವಿಚಾರಣಾ ಕೇಂದ್ರದ ಕಸ್ಟಡಿಯಲ್ಲಿ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಕುರಿತು ಸೋಮವಾರ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ.
ಈ ಘಟನೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆದೇಶಿಸಿದ ನ್ಯಾಯಾಲಯ, ಸಂತ್ರಸ್ತ ಪೊಲೀಸ್ ಪೇದೆಗೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಸರಕಾರಕ್ಕೆ ಸೂಚಿಸಿತು.
Bar and Bench ಸುದ್ದಿ ಸಂಸ್ಥೆಯ ಪ್ರಕಾರ, ತನಗೆ ಕಸ್ಟಡಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಆಯ್ಕೆ ಶ್ರೇಣಿಯ ಪೊಲೀಸ್ ಪೇದೆ ಖುರ್ಷಿದ್ ಅಹ್ಮದ್ ಚೋಹಾನ್ ಎಂಬವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿಕ್ರಂ ನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ತನ್ನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309ರ ಅಡಿ ದಾಖಲಾಗಿರುವ ಆತ್ಮಹತ್ಯೆ ಪ್ರಯತ್ನ ಪ್ರಕರಣವನ್ನು ರದ್ದುಗೊಳಿಸಬೇಕು ಎಂಬ ತನ್ನ ಮನವಿಯನ್ನು ತಳ್ಳಿ ಹಾಕಿದ್ದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ತೀರ್ಪನ್ನೂ ಇದೇ ಮೇಲ್ಮನವಿಯಲ್ಲಿ ಖುರ್ಷಿದ್ ಅಹ್ಮದ್ ಚೋಹಾನ್ ಪ್ರಶ್ನಿಸಿದ್ದಾರೆ.
ಮಾದಕ ದ್ರವ್ಯ ತನಿಖೆಗೆ ಸಂಬಂಧಿಸಿದಂತೆ ಕುಪ್ವಾರದ ಜಂಟಿ ವಿಚಾರಣಾ ಕೇಂದ್ರದಲ್ಲಿ ನನ್ನನ್ನು ಬಂಧನದಲ್ಲಿರಿಸಿದ್ದಾಗ, ನನಗೆ ಅಮಾನವೀಯ ಕಿರುಕುಳ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.







