ಪೊಲೀಸ್ ಕಾನ್ಸ್ಟೆಬಲ್ಗೆ ಚಿತ್ರಹಿಂಸೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಸುಪ್ರೀಂ ಕೋರ್ಟ್ |PC : PTI
ಹೊಸದಿಲ್ಲಿ: ಜಮ್ಮು ಹಾಗೂ ಕಾಶ್ಮೀರದ ಕುಪ್ವಾರದಲ್ಲಿರುವ ಜಂಟಿ ವಿಚಾರಣಾ ಕೇಂದ್ರ (ಜೆಐಸಿ)ದಲ್ಲಿ ಪೊಲೀಸ್ ಕಾನ್ಸ್ಟೆಬಲ್ಗೆ ಕಸ್ಟಡಿ ಚಿತ್ರಹಿಂಸೆ ನೀಡಿದ ಆರೋಪದ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐ ತನಿಖೆಗೆ ಆದೇಶಿಸಿದೆ.
ಪೊಲೀಸ್ ಕಾನ್ಸ್ಟೆಬಲ್ ನ ಕಸ್ಟಡಿ ಚಿತ್ರಹಿಂಸೆಗೆ ಹೊಣೆಗಾರರೆಂದು ಹೇಳಲಾದ ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ನ ಪೊಲೀಸ್ ಅಧಿಕಾರಿಗಳನ್ನು ಬಂಧಿಸುವಂತೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠ ನಿರ್ದೇಶಿಸಿದೆ.
ಮೇಲ್ಮನವಿದಾರ ಖುರ್ಷಿದ್ ಅಹ್ಮದ್ ಚೌಹಾಣ್ ಅವರ ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದರಿಂದ ಅವರಿಗೆ ಪರಿಹಾರವಾಗಿ 50 ಲಕ್ಷ ರೂ. ಪಾವತಿಸುವಂತೆ ಕೂಡ ನ್ಯಾಯಾಲಯ ಕೇಂದ್ರಾಡಳಿತ ಪ್ರದೇಶ ಜಮ್ಮು ಹಾಗೂ ಕಾಶ್ಮೀರಕ್ಕೆ ನಿರ್ದೇಶಿಸಿದೆ.
ಉಚ್ಚ ನ್ಯಾಯಾಲಯದ ತೀರ್ಪನ್ನು ಪೀಠ ರದ್ದುಗೊಳಿಸಿದೆ. ಮೇಲ್ಮನವಿದಾರನ ವಿರುದ್ಧದ ಎಫ್ಐಆರ್ ಅನ್ನು ಕೂಡ ರದ್ದುಗೊಳಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309 (ಆತ್ಮಹತಗೆ ಯತ್ನ)ರ ಅಡಿಯಲ್ಲಿ ತನ್ನ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸಲು ನಿರಾಕರಿಸಿದ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿದಾರ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದರು.
ತನಗೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಲಾಗಿತ್ತು. 2023ರ ಫೆಬ್ರವರಿ 20ರಿಂದ 26ರ ವರೆಗೆ ಕುಪ್ವಾರದಲ್ಲಿರುವ ಜೆಐಸಿಯಲ್ಲಿ ಅಕ್ರಮವಾಗಿ ವಶದಲ್ಲಿ ಇರಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಈ ಕಿರುಕುಳಕ್ಕೆ ಕಾರಣವಾದ ಅಧಿಕಾರಿಗಳ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಲ್ಲದೆ, ಕುಪ್ವಾರದ ಜೆಐಸಿಯಲ್ಲಿರುವ ‘‘ವ್ಯವಸ್ಥಿತ ಸಮಸ್ಯೆ’’ ಕುರಿತು ತನಿಖೆ ನಡೆಸುವಂತೆ ಕೂಡ ಸಿಬಿಐಗೆ ನಿರ್ದೇಶಿಸಿದೆ.







