ಮಹಿಳೆಯರನ್ನು ಕಳ್ಳ ಸಾಗಣೆ ಮಾಡಿದ ಆರೋಪ: ಬಿಹಾರದ ಆಶ್ರಯಧಾಮದ ಮೇಲ್ವಿಚಾರಕಿಯ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಆಶ್ರಯಧಾಮದಲ್ಲಿನ ಮಹಿಳೆಯರನ್ನು ಕಳ್ಳ ಸಾಗಣೆ ಮಾಡಿದ ಹಾಗೂ ಅನೈತಿಕ ಕೃತ್ಯಗಳಿಗೆ ನೆರವು ಒದಗಿಸುತ್ತಿದ್ದ ಆರೋಪ ಎದುರಿಸುತ್ತಿರುವ ಬಿಹಾರದ ಆಶ್ರಯಧಾಮವೊಂದರ ಮೇಲ್ವಿಚಾರಕಿಗೆ ಮಂಜೂರು ಮಾಡಿದ್ದ ಜಾಮೀನನ್ನು ಸೋಮವಾರ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಈ ಪ್ರಕರಣದಲ್ಲಿ ಎರಡನೆ ಆರೋಪಿಯಾಗಿರುವ ಮೇಲ್ವಿಚಾರಕಿಗೆ ಪಟ್ನಾ ಹೈಕೋರ್ಟ್ ಮಂಜೂರು ಮಾಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ ದೂರುದಾರರು/ಮಾಹಿತಿದಾರರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ವಿಕ್ರಂ ನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಿತು.
“ಹಾಲಿ ಪ್ರಕರಣವು ಅಪರೂಪದ್ದಾಗಿದೆ ಎಂಬುದು ನಮ್ಮ ದೃಢ ನಿಲುವಾಗಿದೆ. ಜನವರಿ 18, 2024ರಂದು ನೀಡಲಾಗಿರುವ ಆದೇಶವು ನ್ಯಾಯದ ವಿಡಂಬನೆಯಾಗಿದೆ. ಇಂತಹ ಗಂಭೀರ ಆರೋಪಕ್ಕೆ ಗುರಿಯಾಗಿರುವ ಆರೋಪಿಗೆ ಯಾಕೆ ಜಾಮೀನು ಮಂಜೂರು ಮಾಡಲಾಗಿದೆ ಎಂಬ ಕಾರಣವನ್ನೇ ನೀಡದಿರುವುದು ನ್ಯಾಯಾಲಯದ ಸಾಕ್ಷಿಪ್ರಜ್ಞೆಯನ್ನು ಅಲ್ಲಾಡಿಸಿದೆ. ಇದರಿಂದಾಗಿ, ಸಮಾಜದ ಮೇಲೆ ಪ್ರತಿಕೂಲ ಪರಿಣಾಮವುಂಟಾಗಲಿದೆ” ಎಂದು ಪೀಠವು ಕಳವಳ ವ್ಯಕ್ತಪಡಿಸಿತು.
ಈ ಘಟನೆ ನಡೆದ ವೇಳೆ, ಎರಡನೆ ಆರೋಪಿಯು ಪಟ್ನಾದ ಗಾಯಿಘಾಟ್ ನಲ್ಲಿರುವ ಉತ್ತರ್ ರಕ್ಷಾ ಗೃಹ ಎಂಬ ಆಶ್ರಯಧಾಮದ ಮೇಲ್ವಿಚಾರಕಿಯಾಗಿದ್ದರು. ಇನ್ನು ನಾಲ್ಕು ವಾರಗಳೊಳಗಾಗಿ ಶರಣಾಗಬೇಕೆಂದು ಮಹಿಳಾ ಆರೋಪಿಗೆ ನಿರ್ದೇಶನ ನೀಡಿದ ನ್ಯಾಯಾಲಯವು, ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದರಿಂದ, ಸಾಂದರ್ಭಿಕ ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಹಾಗೂ ಪ್ರಭಾವ ಬೀರುವ ಅಪಾಯವಿದ್ದು, ವಿಚಾರಣೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗಲಿದೆ ಎಂದೂ ಅಭಿಪ್ರಾಯ ಪಟ್ಟಿತು.







