ಬಾಂಕೆ ಬಿಹಾರಿ ಸುಗ್ರೀವಾಜ್ಞೆ ಹೊರಡಿಸುವಲ್ಲಿ ಅವಸರ; ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ,ಆ.4: ಬಾಂಕೆ ಬಿಹಾರಿ ದೇವಸ್ಥಾನ ಟ್ರಸ್ಟ್ ಸುಗ್ರೀವಾಜ್ಞೆಯನ್ನು ಘೋಷಿಸುವಲ್ಲಿ ಅತಿಯಾದ ಅವಸರಕ್ಕಾಗಿ ಉತ್ತರ ಪ್ರದೇಶ ಸರಕಾರವನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತೀವ್ರ ತರಾಟೆಗೆತ್ತಿಕೊಂಡಿತು. ಈ ಸುಗ್ರೀವಾಜ್ಞೆಯು ವೃಂದಾವನದಲ್ಲಿರುವ ಈ ಪ್ರಸಿದ್ಧ ದೇವಸ್ಥಾನದ ಆಡಳಿತವನ್ನು ಸರಕಾರಕ್ಕೆ ಹಸ್ತಾಂತರಿಸುತ್ತದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜಾಯಮಲ್ಯ ಬಾಗ್ಚಿ ಅವರ ಪೀಠವು ದೇವಸ್ಥಾನದ ನಿಧಿಯನ್ನು ಕಾರಿಡಾರ್ ಅಭಿವೃದ್ಧಿಗೆ ಬಳಸಲು ಸರ್ವೋಚ್ಚ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡ ‘ಕಳ್ಳಾಟಿಕೆಯ ವಿಧಾನ’ಕ್ಕಾಗಿಯೂ ಉತ್ತರ ಪ್ರದೇಶ ಸರಕಾರಕ್ಕೆ ಚಾಟಿ ಬೀಸಿತು.
ಕಳೆದ ಮೇ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಅಂದಾಜು 500 ಕೋಟಿ ರೂ.ವೆಚ್ಚದಲ್ಲಿ ಕಾರಿಡಾರ್ ಅಭಿವೃದ್ಧಿಗಾಗಿ ಐದು ಎಕರೆ ಭೂಮಿಯ ಖರೀದಿಗೆ ದೇವಸ್ಥಾನದ ನಿಧಿಯನ್ನು ಬಳಸಿಕೊಳ್ಳಲು ಸರಕಾರಕ್ಕೆ ಅನುಮತಿ ನೀಡಿತ್ತು. ಆದಾಗ್ಯೂ ಭೂಮಿಯನ್ನು ‘ಬಾಂಕೆ ಬಿಹಾರಿ’ಯ ಹೆಸರಿನಲ್ಲಿ ನೊಂದಾಯಿಸಬೇಕೆಂಬ ಷರತ್ತನ್ನು ಅದು ವಿಧಿಸಿತ್ತು.
ಸೋಮವಾರ ವಿಚಾರಣೆ ಸಂದರ್ಭದಲ್ಲಿ ಪೀಠವು ದೇವಸ್ಥಾನದ ನಿಧಿ ಬಳಕೆಗೆ ಅವಕಾಶ ನೀಡಿದ್ದ ಮೇ ತೀರ್ಪನ್ನು ಹಿಂದೆಗೆದುಕೊಳ್ಳುವುದನ್ನು ಪ್ರಸ್ತಾವಿಸಿತು.
ಅಲಹಾಬಾದ್ ಉಚ್ಚ ನ್ಯಾಯಾಲಯವು ಸುಗ್ರೀವಾಜ್ಞೆಯ ಸಿಂಧುತ್ವವನ್ನು ನಿರ್ಧರಿಸುವವರೆಗೆ ದೇವಸ್ಥಾನದ ದೈನಂದಿನ ವ್ಯವಹಾರಗಳ ಮೇಲ್ವಿಚಾರಣೆಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವುದನ್ನೂ ಪೀಠವು ಪ್ರಸ್ತಾವಿಸಿತು.
ಬಾಧಿತ ಪಕ್ಷಗಳಿಗೆ ನೋಟಿಸ್ ನೀಡದೇ ಮೇ ತಿಂಗಳಲ್ಲಿ ನಿರ್ದೇಶನಗಳನ್ನು ಹೊರಡಿಸಿದ್ದ ರೀತಿಯು ದೋಷಯುಕ್ತವಾಗಿದೆ ಎಂದು ಹೇಳಿದ ಪೀಠವು,‘‘ಇದು ’ನೋ ಮ್ಯಾನ್ಸ್ ಲ್ಯಾಂಡ್(ಯಾರಿಗೂ ಸೇರದ ಭೂಮಿ)’ ಪ್ರಕರಣವಾಗಿರಲಿಲ್ಲ. ದೇವಸ್ಥಾನದ ಪರವಾಗಿ ಯಾರದಾದರೂ ಅಹವಾಲನ್ನು ಆಲಿಸಬೇಕಿತ್ತು. ಪರಸ್ಪರ ಕಚ್ಚಾಡುತ್ತಿರುವ ಗುಂಪುಗಳ ನಡುವಿನ ವಿವಾದದಿಂದಾಗಿ ಈ ನ್ಯಾಯಾಲಯವು ಏನಾದರೂ ಸಾರ್ವಜನಿಕ ನೋಟಿಸ್ ಹೊರಡಿಸಬೇಕಿತ್ತು. ಇದನ್ನೇ ನಾವು ಪ್ರಸ್ತಾವಿಸುತ್ತಿದ್ದೇವೆ. ದೇವಾಲಯದ ಹಣವನ್ನು ಯಾತ್ರಿಕರಿಗಾಗಿ ಬಳಸಬೇಕು,ಖಾಸಗಿ ವ್ಯಕ್ತಿಗಳು ಅದನ್ನು ಜೇಬಿಗಿಳಿಸುವಂತಿಲ್ಲ’’ ಎಂದು ನ್ಯಾ.ಸೂರ್ಯಕಾಂತ ಹೇಳಿದರು.
ದೇವಸ್ಥಾನವು ಯಾವಾಗಲೂ ಖಾಸಗಿ ವ್ಯವಸ್ಥಾಪನೆ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದ್ದು,ಈ ಸುಗ್ರೀವಾಜ್ಞೆಯು ಧಾರ್ಮಿಕ ವ್ಯವಹಾರಗಳಲ್ಲಿ ಸರಕಾರದ ಹಸ್ತಕ್ಷೇಪಕ್ಕೆ ಸಮನಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.







