ಉತ್ತರ ಪ್ರದೇಶದ 105 ಪ್ರಾಥಮಿಕ ಶಾಲೆಗಳ ವಿಲೀನ ಪ್ರಶ್ನಿಸಿದ್ದ ಸಂಜಯ ಸಿಂಗ್ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಸಂಜಯ ಸಿಂಗ್ | PC ; PTI
ಹೊಸದಿಲ್ಲಿ,ಆ.18: 105 ಸರಕಾರಿ ಪ್ರಾಥಮಿಕ ಶಾಲೆಗಳನ್ನು ಜೊತೆಗೂಡಿಸಿ ವಿಲೀನಗೊಳಿಸುವ ಉತ್ತರ ಪ್ರದೇಶ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಆಪ್ನ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ.
‘ಶಿಕ್ಷಣ ಹಕ್ಕು ಕಾಯ್ದೆಯಡಿ ಹಕ್ಕುಗಳನ್ನು ಜಾರಿಗೊಳಿಸಲು ನೀವು ಪ್ರಯತ್ನಿಸುತ್ತಿದ್ದೀರಿ. ಅದು ಶಾಸನಬದ್ಧ ಹಕ್ಕು ಆಗಿದ್ದರೆ ಸಂವಿಧಾನದ ವಿಧಿ 32ರ( ಮೂಲಭೂತ ಹಕ್ಕುಗಳ ಜಾರಿಗೆ ಸಂಬಂಧಿಸಿದ) ಅಡಿ ರಿಟ್ ಅರ್ಜಿಯನ್ನಾಗಿ ಮರೆಮಾಚುವಂತಿಲ್ಲ. ಅಲಹಾಬಾದ್ ಉಚ್ಚ ನ್ಯಾಯಾಲಯವು ಈ ವಿಷಯನ್ನು ನಿರ್ಧರಿಸಲಿ’ ಎಂದು ನ್ಯಾಯಮೂರ್ತಿಗಳಾದ ದೀಪಂಕರ ದತ್ತಾ ಮತ್ತು ಎ.ಜಿ.ಮಸಿಹ್ ಅವರ ಪೀಠವು ಆರಂಭದಲ್ಲಿಯೇ ಟೀಕಿಸಿತು.
ವಿಷಯವನ್ನು ಆಲಿಸಲು ಪೀಠವು ಒಲವು ಹೊಂದಿಲ್ಲ ಎನ್ನವುದನ್ನು ಗಮನಿಸಿದ ಸಿಂಗ್ ಪರ ಹಿರಿಯ ನ್ಯಾಯವಾದಿ ಕಪಿಲ ಸಿಬಲ್ ಅವರು,ಅಲಹಾಬಾದ್ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವಾತಂತ್ರ್ಯದೊಂದಿಗೆ ಅರ್ಜಿಯನ್ನು ಹಿಂದೆಗೆದುಕೊಳ್ಳಲು ಅನುಮತಿಯನ್ನು ಕೋರಿದರು. ನಂತರ ಪೀಠವು ಅರ್ಜಿಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಪರಿಗಣಿಸಿ ವಜಾಗೊಳಿಸಿತು.
ಸರಕಾರದ ನಿರ್ಧಾರವು ನಿರಂಕುಶ ಮತ್ತು ಅಸಾಂವಿಧಾನಿಕವಾಗಿದೆ ಹಾಗೂ ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ ಎಂದು ಸಿಂಗ್ ತನ್ನ ಅರ್ಜಿಯಲ್ಲಿ ವಾದಿಸಿದ್ದರು. ಕಡಿಮೆ ದಾಖಲಾತಿಗಳನ್ನು ಹೊಂದಿರುವ ಶಾಲೆಗಳ ವಿಲೀನವು ಶಿಕ್ಷಣ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಸಾರಿಗೆ ಮತ್ತು ಇತರ ಸೌಲಭ್ಯಗಳಿಲ್ಲದೆ ಮಕ್ಕಳು ಹೆಚ್ಚು ದೂರ ಪ್ರಯಾಣಿಸುವಂತೆ ಮಾಡುತ್ತದೆ . ಇದು ಸಂವಿಧಾನದ ವಿಧಿ 21ಎ ಮತ್ತು 2009ರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ ಕಾಯ್ದೆ) ಅಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದೂ ಅರ್ಜಿಯು ವಾದಿಸಿತ್ತು.







