ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಬಳಸದಿದ್ದರೆ ತೆರಿಗೆ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ,ಆ.31: ಮೋಟರ್ ವಾಹನ ತೆರಿಗೆಯು ಪರಿಹಾರಾತ್ಮಕ ಸ್ವರೂಪದ್ದಾಗಿದೆ ಮತ್ತು ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಬಳಸದಿದ್ದರೆ ಅಥವಾ ಬಳಸಲು ಇಟ್ಟಿರದಿದ್ದರೆ ಆ ಅವಧಿಗೆ ಅದರ ಮಾಲಿಕನಿಗೆ ತೆರಿಗೆಯನ್ನು ವಿಧಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪೊಂದರಲ್ಲಿ ಹೇಳಿದೆ.
ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ಡಿಸೆಂಬರ್ 2024ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಮನೋಜ ಮಿಶ್ರಾ ಮತ್ತು ಉಜ್ಜಲ್ ಭುಯಾನ ಅವರ ಪೀಠವು ಆ.29ರಂದು ಈ ಆದೇಶವನ್ನು ಹೊರಡಿಸಿದೆ.
ಮೋಟರ್ ವಾಹನ ತೆರಿಗೆಯು ಸ್ವರೂಪದಲ್ಲಿ ಪರಿಹಾರಾತ್ಮಕವಾಗಿದೆ. ಅದು ಅಂತಿಮ ಬಳಕೆಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ರಸ್ತೆಗಳು,ಹೆದ್ದಾರಿಗಳು ಇತ್ಯಾದಿಗಳಂತಹ ಸಾರ್ವಜನಿಕ ಮೂಲಸೌಕರ್ಯವನ್ನು ಬಳಸುವ ವ್ಯಕ್ತಿಯು ಹಣವನ್ನು ಪಾವತಿಸಬೇಕಾಗುತ್ತದೆ ಎನ್ನುವುದು ಮೋಟರ್ ವಾಹನ ತೆರಿಗೆ ವಿಧಿಸುವುದರ ಹಿಂದಿನ ತಾರ್ಕಿಕತೆಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.
ಆಂಧ್ರಪ್ರದೇಶ ಮೋಟರ್ ವಾಹನಗಳ ತೆರಿಗೆ ಕಾಯ್ದೆ,1963ರ ಕಲಂ 3ನ್ನು ಉಲ್ಲೇಖಿಸಿದ ಪೀಠವು,ಶಾಸಕಾಂಗವು ಈ ನಿಬಂಧನೆಯಲ್ಲಿ ‘ಸಾರ್ವಜನಿಕ ಸ್ಥಳ’ ಎಂಬ ಅಭಿವ್ಯಕ್ತಿಯನ್ನು ಪ್ರಜ್ಞಾಪೂರ್ವಕವಾಗಿ ಬಳಸಿದೆ ಎಂದು ಹೇಳಿದೆ. ಕಲಂ 3 ಮೋಟರ್ ವಾಹನಗಳಿಗೆ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದೆ.
ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಬಳಸದಿದ್ದರೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಬಳಸಲು ಇಟ್ಟಿರದಿದ್ದರೆ ಆಗ ವ್ಯಕ್ತಿಯು ಸಾರ್ವಜನಿಕ ಮೂಲಸೌಕರ್ಯದಿಂದ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ, ಹೀಗಾಗಿ ಅಂತಹ ಅವಧಿಗೆ ವ್ಯಕ್ತಿಗೆ ಮೋಟರ್ ವಾಹನ ತೆರಿಗೆಯನ್ನು ವಿಧಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.







