ಸ್ಮಾರಕದ ನೈರ್ಮಲ್ಯ ಕಾಪಾಡುವಲ್ಲಿ ನಿಷ್ಕ್ರಿಯತೆ; ದಿಲ್ಲಿ ಮಹಾನಗರ ಪಾಲಿಕೆಗೆ ಸುಪ್ರೀಂ ಕೋರ್ಟ್ ತರಾಟೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ, ಸೆ. 5: ರಾಷ್ಟ್ರ ರಾಜಧಾನಿಯ ರಕ್ಷಣಾ ಕಾಲನಿ ಪ್ರದೇಶದಲ್ಲಿರುವ ಲೋಧಿ ಕಾಲದ ಐತಿಹಾಸಿಕ ಸ್ಮಾರಕ ‘ಶೇಖ್ ಅಲಿಯ ಸ್ತಂಭ’ದ ಸುತ್ತ ನೈರ್ಮಲ್ಯ ಕಾಪಾಡುವಲ್ಲಿ ತೋರಿಸಿರುವ ನಿಷ್ಕ್ರಿಯತೆಗಾಗಿ ಸುಪ್ರೀಂ ಕೋರ್ಟ್ ಗುರುವಾರ ದಿಲ್ಲಿ ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ.
‘‘ಯಾರಾದರೂ ಗಣ್ಯರು ಬಂದರೆ ನೀವು ಅದನ್ನು ಎರಡು ಗಂಟೆಗಳಲ್ಲಿ ಸ್ವಚ್ಛಗೊಳಿಸಿ, ಆ ಸ್ಥಳವನ್ನು ಚೊಕ್ಕಟವಾಗಿಡುತ್ತೀರಿ. ಇದು ನೀವು ನಮ್ಮ ಆದೇಶಗಳಿಗೆ ತೋರಿಸುವ ಗೌರವವೇ? ನಮ್ಮನ್ನು ನಿಯಂತ್ರಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ಇದು ನಿಮ್ಮ ವರ್ತನೆಯೇ? ಈ ಕೆಲಸವನ್ನು ಪುರಾತತ್ವ ಇಲಾಖೆ ಮಾಡಬೇಕು ಎಂದು ನೀವು ಹೇಳುತ್ತೀರಿ. ಇಲ್ಲಿ ಪ್ರತಿಷ್ಠೆಗೆ ಸಂಬಂಧಿಸಿದ ವಿಷಯ ಏನಾದರೂ ಇದೆಯೇ?’’ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠವೊಂದು ದಿಲ್ಲಿ ಮಹಾನಗರ ಪಾಲಿಕೆಯನ್ನು ಪ್ರಶ್ನಿಸಿತು.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಯಾಗಿಸುವಂತೆ ಪಾಲಿಕೆಯ ಕಮಿಶನರ್ ಗೆ ನಿರ್ದೇಶನ ನೀಡಿದ ನ್ಯಾಯಪೀಠವು, ನ್ಯಾಯಾಲಯದ ಕಮಿಶನರ್ ತೋರಿಸಿರುವ ಲೋಪಗಳನ್ನು ನಿವಾರಿಸುವುದಕ್ಕೆ ಸಂಬಂಧಿಸಿ ಕ್ರಿಯಾ ಯೋಜನೆಯೊಂದನ್ನು ಸಲ್ಲಿಸುವಂತೆಯೂ ಸೂಚಿಸಿತು.





