ಒಳಚರಂಡಿ ಸ್ವಚ್ಛತೆಗೆ ಕಾರ್ಮಿಕರ ಬಳಕೆ : ದಿಲ್ಲಿ ಪಿಡಬ್ಲ್ಯುಡಿಗೆ 5 ಲಕ್ಷ ರೂ.ದಂಡ ವಿಧಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ,ಸೆ.19: ನ್ಯಾಯಾಲಯದ ಆವರಣದ ಹೊರಗೆ ಅಪ್ರಾಪ್ತ ವಯಸ್ಕ ಬಾಲಕನೋರ್ವ ಸೇರಿದಂತೆ ಕಾರ್ಮಿಕರು ಯಾವುದೇ ರಕ್ಷಣಾತ್ಮಕ ಸಾಧನಗಳಿಲ್ಲದೆ ಒಳಚರಂಡಿಯ ಸ್ವಚ್ಛತೆಯಲ್ಲಿ ತೊಡಗಿದ್ದು ಕಂಡು ಬಂದ ನಂತರ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ವಿರುದ್ಧ ತನ್ನ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಗುರುವಾರ ದಿಲ್ಲಿ ಸರಕಾರದ ಲೋಕೋಪಯೋಗಿ ಇಲಾಖೆಗೆ(ಪಿಡಬ್ಲ್ಯುಡಿ) ಐದು ಲ.ರೂ.ಗಳ ದಂಡವನ್ನು ವಿಧಿಸಿದೆ.
ದೈಹಿಕವಾಗಿ ಒಳಚರಂಡಿಯನ್ನು ಸ್ವಚ್ಛಗೊಳಿಸುವ ಪದ್ಧತಿಯನ್ನು ಹಂತ ಹಂತವಾಗಿ ಕೊನೆಗೊಳಿಸುವಂತೆ ತನ್ನ 2023ರ ಆದೇಶವನ್ನು ಕಡೆಗಣಿಸಲಾಗಿದೆ ಎನ್ನುವುದನ್ನು ನ್ಯಾಯಮೂರ್ತಿಗಳಾದ ಅರವಿಂದ ಕುಮಾರ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು ಗಮನಕ್ಕೆ ತೆಗೆದುಕೊಂಡಿತು. ಭವಿಷ್ಯದಲ್ಲಿ ಯಾವುದೇ ಉಲ್ಲಂಘನೆಗಳಿಗಾಗಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಅದು ಎಚ್ಚರಿಕೆ ನೀಡಿತು.
ಪಿಡಬ್ಲ್ಯುಡಿ ಮಾತ್ರವಲ್ಲ,ಎಲ್ಲ ಇಲಾಖೆಗಳ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕು ಮತ್ತು ತನ್ನ ನಿರ್ದೇಶನಗಳು ಅಕ್ಷರಶಃ ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪೀಠವು ಹೇಳಿತು.
ಒಳಚರಂಡಿಗಳು ಅಥವಾ ಸೆಪ್ಟಿಕ್ ಟ್ಯಾಂಕ್ಗಳಿಂದ ಮಾನವ ಮಲವನ್ನು ಕೈಗಳಿಂದ ತೆಗೆದು ಸ್ವಚ್ಛಗೊಳಿಸುವ ಅನಿಷ್ಟ ಪದ್ಧತಿಯಾಗಿರುವ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ನ್ನು 2013ರ ಮಲ ಹೊರುವ ಕಾರ್ಮಿಕರಾಗಿ ನೇಮಕ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆಯಡಿ ನಿಷೇಧಿಸಲಾಗಿದೆ. ಆದಾಗ್ಯೂ ದೇಶದ ಹಲವಾರು ಕಡೆಗಳಲ್ಲಿ ಈಗಲೂ ಈ ಪದ್ಧತಿಯು ಉಳಿದುಕೊಂಡಿದೆ.
ಅಮಿಕಸ್ ಕ್ಯೂರೆಯಾಗಿ ನ್ಯಾಯಾಲಯಕ್ಕೆ ನೆರವಾಗುತ್ತಿರುವ ವಕೀಲ ಕೆ.ಪರಮೇಶ್ವರ ಅವರು, ಈ ಘಟನೆಯು ಕಡ್ಡಾಯವಾಗಿ ಪಾಲಿಸಬೇಕಾದ ನಿರ್ದೇಶನಗಳಿಗೆ ಸ್ಪಷ್ಟ ಅಗೌರವವಾಗಿದೆ. ಅಪ್ರಾಪ್ತ ವಯಸ್ಕ ಬಾಲಕನನ್ನು ಕೆಲಸದಲ್ಲಿ ತೊಡಗಿಸಲಾಗಿತ್ತು ಮತ್ತು ಅದು ವೀಡಿಯೊದಲ್ಲಿ ನಿರ್ದಿಷ್ಟವಾಗಿ ದಾಖಲಾಗಿದೆ ಎಂದು ಹೇಳಿದರು.
ತಿಲಕನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲು ಉದ್ದೇಶಿಸಲಾಗಿತ್ತು, ಆದರೆ ಪೋಲಿಸರು ಅಥವಾ ಪಿಡಬ್ಲ್ಯುಡಿ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಅವರು, ಇದು ಕೇವಲ ಕಾರ್ಮಿಕ ಕಾನೂನಿನ ಉಲ್ಲಂಘನೆಯಲ್ಲ, ಸಾಂವಿಧಾನಿಕ ಬಾಧ್ಯತೆಗಳ ಉಲ್ಲಂಘನೆಯೂ ಆಗಿದೆ. ದಂಡವನ್ನು ಅಧಿಕಾರಿಗಳಿಂದಲೇ ವಸೂಲು ಮಾಡಿಕೊಳ್ಳಲಿ ಎಂದರು.
ತನ್ನ ಹಿಂದಿನ ನಿರ್ದೇಶನಗಳನ್ನು ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಹೇಳಿದ ಪೀಠವು,ರಕ್ಷಣಾತ್ಮಕ ಸಾಧನಗಳಿಲ್ಲದೆ ಕಾರ್ಮಿಕರು ಚರಂಡಿ ಅಥವಾ ಒಳಚರಂಡಿಗಳನ್ನು ಪ್ರವೇಶಿಸುವಂತೆ ಮಾಡಬಾರದು ಎಂದು ಒತ್ತಿ ಹೇಳಿತು. ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದು ಅಧಿಕಾರಿಗಳ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲು ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿತು.
‘ಈ ಹಂತದಲ್ಲಿ, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂಬ ಸರಳ ಕಾರಣದಿಂದಾಗಿ ಮತ್ತು ಅಧಿಕಾರಿಗಳು ಅಥವಾ ಅವರಿಂದ ನೆಮಕಗೊಂಡ ಗುತ್ತಿಗೆದಾರರು ರಕ್ಷಣಾತ್ಮಕ ಸಾಧನಗಳಿಲ್ಲದೆ ಕಾರ್ಮಿಕರು ಚರಂಡಿ ಅಥವಾ ಒಳಚರಂಡಿಯನ್ನು ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಅಂತಹ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಪೀಠವು ಹೇಳಿತು.
ಮಲ ಹೊರುವ ಪದ್ಧತಿಯ ಮುಂದುವರಿಕೆಯನ್ನು ಎತ್ತಿ ತೋರಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.







