ದಿಲ್ಲಿಯಲ್ಲಿ ಹಸಿರು ಪಟಾಕಿ ತಯಾರಿಕೆಗೆ ಸುಪ್ರೀಂ ಸಮ್ಮತಿ : ಮಾರಾಟ, ದಾಸ್ತಾನಿಗೆ ನಿಷೇಧ ಮುಂದುವರಿಕೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಸೆ.25: ದಿಲ್ಲಿ- ರಾಷ್ಟ್ರ ರಾಜಧಾನಿ ಪ್ರಾಂತದಲ್ಲಿ ಹಸಿರು ಪಟಾಕಿಗಳ ತಯಾರಿಕೆಗೆ ಸುಪ್ರೀಂಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಆದಾಗ್ಯೂ ಪ್ರಾಂತದೊಳಗೆ ಅವುಗಳ ಮಾರಾಟ ಅಥವಾ ದಾಸ್ತಾನಿನ ಮೇಲೆ ಹೇರಲಾಗಿರುವ ನಿಷೇಧ ಮುಂದುವರಿಯಲಿದೆ ಎಂದು ‘ಬಾರ್ ಆ್ಯಂಡ್ ಬೆಂಚ್’ ವರದಿ ಮಾಡಿದೆ.
ಆಕ್ಟೋಬರ್ 21ರಿಂದ ಆಚರಿಸಲಾಗುವ ದೀಪಾವಳಿ ಹಬ್ಬಕ್ಕೆ ಪೂರ್ವಭಾವಿಯಾಗಿ ಈ ಆದೇಶವನ್ನು ಹೊರಡಿಸಲಾಗಿದೆ. ಸಾಧಾರಣ ಪಟಾಕಿಗಳಿಗಿಂತ ಹಸಿರು ಪಟಾಕಿಗಳು ಕಡಿಮೆ ಮಾಲಿನ್ಯ ಕಾರಕವಾಗಿವೆ ಹಾಗೂ ಅವುಗಳನ್ನು ಸುಧಾರಿತ ರಾಸಾಯನಿಕ ಸಂಯೋಜನೆಯೊಂದಿಗೆ ಅವುಗಳನ್ನು ತಯಾರಿಸಲಾಗುತ್ತದೆ ಮತ್ತು ಅವು ಲಿಥಿಯಂ, ಆರ್ಸೆನಿಕ್, ಬೇರಿಯಮ್ ಹಾಗೂ ಸೀಸನಂತ ನಿರ್ದಿಷ್ಟ ಅಪಾಯಕಾರಿ ಅಂಶಗಳನ್ನು ಒಳಗೊಂಡಿರುವುದಿಲ್ಲ ಎಂದರು.
ರಾಷ್ಟ್ರರಾಜಧಾನಿ ಪ್ರಾಂತದಲ್ಲಿ ಈ ಹಿಂದೆ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವುದು ಹಾಗೂ ಇದರಿಂದ ಕಾರ್ಮಿಕರ ಜೀವನೋಪಾಯಗಳ ಮೇಲೆ ಆಗಿರುವ ಪರಿಣಾಮದ ಕುರಿತು ವ್ಯಕ್ತವಾಗಿರುವ ಕಳವಳಗಳಿಗೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ.
ರಾಷ್ಟ್ರರಾಜಧಾನಿ ಪ್ರಾಂತದಲ್ಲಿ ಹಸಿರು ಪಟಾಕಿ ಉತ್ಪಾದನೆ ನಿಷೇಧಕ್ಕೂ, ಬಿಹಾರದಲ್ಲಿ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ವಿಧಿಸಿದ್ದ ಹಿಂದಿನ ಆದೇಶವನ್ನು ಸಿಜೆಐ ಅವರು ಈ ಸಂದರ್ಭ ತುಲನೆ ಮಾಡಿದರು. ಬಿಹಾರದಲ್ಲಿ ಗಣಿಗಾರಿಕೆಗೆ ಸಂಪೂರ್ಣ ನಿಷೇಧವು ಅಕ್ರಮ ಗಣಿಗಾರಿಕೆ ಮಾಫಿಯಾಗಳ ಬೆಳವಣಿಗೆಗೆ ಕಾರಣವಾಯಿತು. ಆದುದರಿಂದ ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗ ಸಂತುಲಿತವಾದ ನಿಲುವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಗವಾಯಿ ಪ್ರತಿಪಾದಿಸಿದರು.
ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಪೀಠವು ಅಕ್ಟೋಬರ್ 8ಕ್ಕೆ ಮಂದೂಡಿದೆ.







