ಸಿಜೆಐ ಮೇಲೆ ಚಪ್ಪಲಿ ಎಸೆತದ ಘಟನೆಯ ಸುದ್ದಿಯನ್ನು ಇಲ್ಲಿಗೇ ಮುಗಿಸಿ ಬಿಡಿ: ಸುಪ್ರೀಂ ಕೋರ್ಟ್

ಸುಪ್ರೀಂಕೋರ್ಟ್ | Photo Credit : PTI
ಹೊಸದಿಲ್ಲಿ,ಅ.15: ಭಾರತದ ಮುಖ್ಯನ್ಯಾಯಮೂರ್ತಿ (ಸಿಜೆಐ) ಗವಾಯಿ ಅವರ ಮೇಲಿನ ದಾಳಿ ಪ್ರಕರಣವನ್ನು ಹಣಗಳಿಕೆಯ ಸಾಧನವಾಗಿ ಮಾಡಲು ಸಾಮಾಜಿಕ ಮಾಧ್ಯಮಗಳಿಗೆ ಅವಕಾಶ ನೀಡುವ ಬದಲು ಅದನ್ನು ಇಲ್ಲಿಗೇ ಮುಗಿಸಿ ಬಿಡುವುದು ಒಳಿತು ಎಂದು ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ.
ಸಿಜೆಐ ಬಿ.ಆರ್. ಗವಾಯಿ ವಿರುದ್ಧ ಚಪ್ಪಲಿ ಎಸೆಯಲು ಯತ್ನಿಸಿದ್ದನೆನ್ನಲಾದ ನ್ಯಾಯವಾದಿ ರಾಕೇಶ್ ಕಿಶೋರ್ ವಿರುದ್ಧ ಕ್ರಿಮಿನಲ್ ಸ್ವರೂಪದ ನ್ಯಾಯಾಂಗ ನಿಂದನೆ ಕ್ರಮವನ್ನು ಕೈಗೊಳ್ಳುವುದಕ್ಕೆ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ಒಪ್ಪಿಗೆ ನೀಡಿದ್ದಾರೆಂದು ಸುಪ್ರೀಂಕೋರ್ಟ್ ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದಾಗ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜಯಮಾಲಾ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಖಾಸಗಿ ವ್ಯಕ್ತಿಯೊಬ್ಬರು ಕ್ರಿಮಿನಲ್ ಕೋರ್ಟ್ ನಿಂದನೆ ವಿರುದ್ಧ ಕಾನೂನುಕ್ರಮ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುವ ಮುನ್ನ ಅದು ಅಟಾರ್ನಿ ಅಥವಾ ಸಾಲಿಸಿಟರ್ ಜನರಲ್ ಅವರ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ.
ಅರ್ಜಿಯ ಆಲಿಕೆಯನ್ನು ಶುಕ್ರವಾರಕ್ಕೆ ನಿಗದಿಪಡಿಸುವಂತೆ ವಿಕಾಸ್ ಸಿಂಗ್ ಅವರು ನ್ಯಾಯಾಲಯವನ್ನು ಆಗ್ರಹಿಸಿದ್ದರು.
ಅಕ್ಟೋಬರ್ 20ರಿಂದ ಆರಂಭವಾಗಲಿರುವ ದೀಪಾವಳಿ ರಜಾ ದಿನಗಳ ಬಳಿಕ ನ್ಯಾಯಪೀಠವು ಪ್ರಕರಣದ ಆಲಿಕೆಯನ್ನು ನಡೆಸಲು ನಿರ್ಧರಿಸಿದೆಯೆಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಆಕ್ಟೋಬರ್ 6ರಂದು ನ್ಯಾಯವಾದಿ ರಾಕೇಶ್ ಕಿಶೋರ್ ಎಂಬಾತ ಗವಾಯಿ ಅವರ ಮೇಲೆ ಚಪ್ಪಲಿ ಎಸೆಯಲು ಯತ್ನಿಸಿದ್ದನು. ಗವಾಯಿ ಅವರು ಹಿಂದೂಧರ್ಮವನ್ನು ಅಪಮಾನಿಸುತ್ತಿದ್ದಾರೆಂದು ಆತ ಆಪಾದಿಸಿದ್ದನು. ವಿರೂಪಗೊಂಡಿರುವ ವಿಷ್ಣು ದೇವರ ವಿಗ್ರಹವನ್ನು ಮರುಸ್ಥಾಪಿಸಬೇಕೆಂದು ಕೋರಿ ವಿಕಾಸ್ ಸಲ್ಲಿಸಿದ ಅರ್ಜಿಯನ್ನು ಸಿಜೆಐ ತಿರಸ್ಕರಿಸಿದ್ದುದರಿಂದ ಆತ ಆಕ್ರೋಶಗೊಂಡಿದ್ದ ಎನ್ನಲಾಗಿದೆ.







