ಸುಪ್ರೀಂ ಕೋರ್ಟ್ ಜೀವಿಸುವ ಹಕ್ಕಿನ ಬದಲು ಪಟಾಕಿ ಸಿಡಿಸುವ ಹಕ್ಕನ್ನು ಆಯ್ದುಕೊಂಡಿದೆ: ಅಮಿತಾಭ್ ಕಾಂತ್ ಅಸಮಾಧಾನ

Photo Credit : NDTV
ಹೊಸದಿಲ್ಲಿ: ದಿಲ್ಲಿಯಲ್ಲಿ ವಿಷಮಿಸುತ್ತಿರುವ ವಾಯು ಗುಣಮಟ್ಟದ ಕುರಿತು ಕಳವಳ ವ್ಯಕ್ತಪಡಿಸಿರುವ 2023ರ ಜಿ20 ಶೃಂಗಸಭೆಗೆ ಭಾರತದಿಂದ ಶೆರ್ಪಾ ಆಗಿ ಪಾಲ್ಗೊಂಡಿದ್ದ ಹಾಗೂ ನೀತಿ ಆಯೋಗದ ಚಿಂತಕರ ಚಾವಡಿಯ ಸಿಇಒ ಆಗಿದ್ದ ಅಮಿತಾಭ್ ಕಾಂತ್, “ಸುಪ್ರೀಂ ಕೋರ್ಟ್ ಜೀವಿಸುವ ಹಕ್ಕಿನ ಬದಲು ಪಟಾಕಿ ಸಿಡಿಸುವ ಹಕ್ಕನ್ನು ಆಯ್ದುಕೊಂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೀಪಾವಳಿಯ ಪ್ರಯುಕ್ತ ನಿನ್ನೆ ರಾತ್ರಿ ಜನರು ಸಿಡಿಸಿದ ಪಟಾಕಿಯಿಂದ ವಾಯು ಮಾಲಿನ್ಯ ಗುಣಮಟ್ಟ ವಿಷಕಾರಿಯಾಗಿದೆ ಎಂಬ ವರದಿಗಳ ಬೆನ್ನಿಗೇ ಅಮಿತಾಭ್ ಕಾಂತ್ ರಿಂದ ಈ ತೀವ್ರ ಅಸಮಾಧಾನದ ಹೇಳಿಕೆ ಹೊರ ಬಿದ್ದಿದೆ. ಕೇಂದ್ರ ವಾಯು ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, ದಿಲ್ಲಿಯಲ್ಲಿ ವಾಯು ಗುಣಮಟ್ಟ ನಿನ್ನೆ ರಾತ್ರಿ 1 ಗಂಟೆಗೆ 357ಕ್ಕೆ ತಲುಪಿದ್ದು, ಇದನ್ನು ತೀರಾ ಕಳಪೆ ಎಂದು ವರ್ಗೀಕರಿಸಲಾಗಿದೆ.
ಇದಕ್ಕೂ ಮುನ್ನ, ಈ ತಿಂಗಳ ಆರಂಭದಲ್ಲಿ ದೀಪಾವಳಿ ಪ್ರಯುಕ್ತ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹೇರಲಾಗಿದ್ದ ಪಟಾಕಿಗಳ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿತ್ತು. “ಪಟಾಕಿ ಸಿಡಿಸಲು ಅನುಮತಿ ನೀಡುವುದರಿಂದ ಉದ್ಭವಿಸುವ ಪರಿಸ್ಥಿತಿಗಳೊಂದಿಗೆ ರಾಜಿ ಮಾಡಿಕೊಳ್ಳದೆ, ಹಿತಾಸಕ್ತಿ ಸಂಘರ್ಷ ಹಾಗೂ ಸಾಧಾರಣ ಸ್ವರೂಪದ ಅನುಮತಿ ನೀಡುವುದನ್ನು ಪರಿಗಣನೆಗೆ ತೆಗೆದುಕೊಂಡು ಸಮತೋಲಿತ ನಿಲುವನ್ನು ತೆಗೆದುಕೊಳ್ಳಲಾಗಿದೆ” ಎಂದು ನ್ಯಾಯಾಲಯ ಹೇಳಿತ್ತು.
ದಿಲ್ಲಿಯಲ್ಲಿ ಎರಡು ದಿನಗಳ ಕಾಲ ಬೆಳಗ್ಗೆ 6ರಿಂದ 7 ಗಂಟೆ ಹಾಗೂ ರಾತ್ರಿ 8 ಗಂಟೆಯಿಂದ 10 ಗಂಟೆಯ ನಡುವೆ ಪಟಾಕಿ ಸಿಡಿಸಲು ನ್ಯಾಯಾಲಯ ಅನುಮತಿ ನೀಡಿದ್ದರೂ, ದಿಲ್ಲಿ-ಎನ್ಸಿಆರ್ ಪ್ರದೇಶದಲ್ಲಿ ಮಧ್ಯರಾತ್ರಿ ಕಳೆದರೂ ಜನರು ಪಟಾಕಿಗಳನ್ನು ಸಿಡಿಸುತ್ತಿದ್ದರು ಎಂದು ವರದಿಯಾಗಿದೆ.







