ತಪ್ಪು ಶಿಕ್ಷೆಗೆ ಪರಿಹಾರ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಚಿಂತನೆ

ಸುಪ್ರೀಂ ಕೋರ್ಟ್ |Photo Credit : sci.gov.in
ಹೊಸದಿಲ್ಲಿ: ವ್ಯವಸ್ಥೆಯು ಆರೋಪಿಗಳನ್ನು ಬಲಿಪಶುಗಳನ್ನಾಗಿ ಮಾಡುವ ಮತ್ತು ಅವರ ವಿರುದ್ಧ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತಿಮವಾಗಿ ಅವರು ಖುಲಾಸೆಗೊಂಡರೂ ಅದಕ್ಕೂ ಮುನ್ನ ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುತ್ತಿರುತ್ತಾರೆ. ಇದೀಗ ಸರ್ವೋಚ್ಚ ನ್ಯಾಯಾಲಯವು ತಪ್ಪಾಗಿ ಬಂಧಿಸಲ್ಪಟ್ಟ, ವಿಚಾರಣೆಗೊಳಗಾದ ಅಥವಾ ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಪರಿಹಾರವನ್ನು ನೀಡುವ ಸಂಕೀರ್ಣ ವಿಷಯವನ್ನು ಪರಿಶೀಲಿಸಲು ನಿರ್ಧರಿಸಿದೆ ಎಂದು Times of India ವರದಿ ಮಾಡಿದೆ.
ದೇಶದಲ್ಲಿ ಶಿಕ್ಷೆಯ ಪ್ರಮಾಣ ಕೇವಲ ಸುಮಾರು ಶೇ.54ರಷ್ಟಿರುವುದರಿಂದ ಪ್ರಮುಖ ಪರಿಣಾಮಗಳನ್ನು ಬೀರಬಲ್ಲ ಈ ವಿಷಯವನ್ನು ನಿರ್ಧರಿಸಲು ನೆರವಾಗುವಂತೆ ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಸಂದೀಪ ಮೆಹ್ತಾ ಅವರ ಪೀಠವು ಸೋಮವಾರ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರ ನೆರವನ್ನು ಕೋರಿತು.
ಇಂತಹ ಆರೋಪಿಯೋರ್ವನ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ ಸುಬ್ರಮಣಿಯಂ ಅವರು, ಸುಳ್ಳು ಆರೋಪಗಳ ಮೇಲೆ ಬಂಧಿಸಲ್ಪಟ್ಟು ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವ ವ್ಯಕ್ತಿಗಳಿಗೆ ಅವರು ಖುಲಾಸೆಗೊಂಡ ಬಳಿಕ ಪರಿಹಾರವನ್ನು ನೀಡಬೇಕು, ಏಕೆಂದರೆ ಅವರ ಜೈಲುವಾಸವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು. ಈ ವಿಷಯದಲ್ಲಿ ಮಾರ್ಗಸೂಚಿಗಳನ್ನು ರೂಪಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿದ ಅವರು, ಕಾನೂನು ಆಯೋಗವೂ ಇದಕ್ಕಾಗಿ ಶಾಸನಬದ್ಧ ಚೌಕಟ್ಟನ್ನು ಶಿಫಾರಸು ಮಾಡಿರುವುದನ್ನು ಉಲ್ಲೇಖಿಸಿದರು.
ಅಪ್ರಾಪ್ತ ವಯಸ್ಕ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಮರಣ ದಂಡನೆಗೆ ಗುರಿಯಾದ ಬಳಿಕ ಸಾವಿನ ನೆರಳಿನಲ್ಲಿ ಕಳೆದಿದ್ದ ಆರು ವರ್ಷಗಳು ಸೇರಿದಂತೆ 12 ವರ್ಷಗಳ ಕಾಲ ಜೈಲಿನಲ್ಲಿ ಕೊಳೆತಿದ್ದ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ನಂತರ ವ್ಯಕ್ತಿಯನ್ನು ಖುಲಾಸೆಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು, ಪೋಲಿಸರು ಆತನ ವಿರುದ್ಧ ಸುಳ್ಳುಸಾಕ್ಷ್ಯ ಸೃಷ್ಟಿಸಿದ್ದರು ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು. ವರ್ಷಗಳ ಕಾಲ ವೃಥಾ ಜೈಲುವಾಸವನ್ನು ಅನುಭವಿಸಿದ್ದಕ್ಕಾಗಿ ಪರಿಹಾರ ಕೋರಿ ವ್ಯಕ್ತಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.
ಅರ್ಜಿದಾರರು ಸಂವಿಧಾನದ ವಿಧಿ 21ರಡಿ ಖಾತರಿ ಪಡಿಸಲಾಗಿರುವ ತನ್ನ ಮೂಲಭೂತ ಹಕ್ಕುಗಳ ಗಂಭೀರ ಮತ್ತು ತೀವ್ರ ಉಲ್ಲಂಘನೆಯ ಬಲಿಪಶುವಾಗಿದ್ದಾರೆ. ಅವರ ಬಂಧನ, ವಿಚಾರಣೆ ಮತ್ತು ಶಿಕ್ಷೆಗೆ ಸರಕಾರದ ಅಧಿಕಾರಿಗಳೇ ಹೊಣೆಗಾರರಾಗಿದ್ದಾರೆ. ತನ್ನ ಅಧಿಕಾರಿಗಳ ದುಷ್ಕೃತ್ಯದ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕು ಮತ್ತು ಅದರಿಂದ ನಾಗರಿಕರ ಮೂಲಭೂತ ಹಕ್ಕುಗಳಿಗೆ ಉಂಟಾದ ಹಾನಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎನ್ನುವುದು ಸ್ಥಾಪಿತ ನೀತಿಯಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ನೊಂದ ವ್ಯಕ್ತಿಗಳು ಇಂತಹುದೇ ಎರಡು ಅರ್ಜಿಗಳನ್ನು ಸಲ್ಲಿಸಿರುವುದರಿಂದ ನ್ಯಾಯಾಲಯವು ಎಲ್ಲ ಮೂರೂ ಪ್ರಕರಣಗಳನ್ನು ಒಟ್ಟಿಗೆ ಸೇರಿಸಲು ಆದೇಶಿಸಿದೆ.
ನ್ಯಾಯದಾನದಲ್ಲಿ ತಪ್ಪನ್ನು ಸರಿಪಡಿಸಲು ನಿರ್ದಿಷ್ಟ ಕಾನೂನು ನಿಬಂಧನೆಯನ್ನು ಜಾರಿಗೆ ತರುವಂತೆ ಕಾನೂನು ಆಯೋಗವು 2018ರಲ್ಲಿ ಶಿಫಾರಸು ಮಾಡಿತ್ತು.







