ದಿಲ್ಲಿ ಗಲಭೆಯಲ್ಲಿ ಭಾಗಿಯಾಗಿರುವ ಯಾವುದೇ ಪುರಾವೆ ಇಲ್ಲ: ಸುಪ್ರೀಂ ಕೋರ್ಟ್ಗೆ ತಿಳಿಸಿದ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಶಾ

ಉಮರ್ ಖಾಲಿದ್, ಶರ್ಜೀಲ್ ಇಮಾಮ್ | Photo Credit : PTI
ಹೊಸದಿಲ್ಲಿ, ಅ. 31: 2020ರಲ್ಲಿ ನಡೆದ ಈಶಾನ್ಯ ದಿಲ್ಲಿ ಗಲಭೆಗಳಿಗೆ ಸಂಬಂಧಿಸಿದ ಅತಿ ದೊಡ್ಡ ಪಿತೂರಿ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರರಾದ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಹಾಗೂ ಇತರ ಮೂವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು.
ಅರವಿಂದ್ ಕುಮಾರ್ ಹಾಗೂ ಎನ್.ವಿ. ಅಂಜಾರಿಯಾ ಅವರ ಪೀಠ, ಮಿರಾನ್ ಹೈದರ್, ಮುಹಮ್ಮದ್ ಸಲೀಮ್ ಖಾನ್ ಹಾಗೂ ಶಿಫಾ ಉರ್ ರಹ್ಮಾನ್ ಸೇರಿದಂತೆ ಇತರ ಆರೋಪಿಗಳು ಹಾಗೂ ದಿಲ್ಲಿ ಪೊಲೀಸರ ವಾದವನ್ನು ಆಲಿಸಲು ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.
ಜಾಮೀನು ನಿರಾಕರಿಸಿ ದಿಲ್ಲಿ ಉಚ್ಚ ನ್ಯಾಯಾಲಯ ಸೆಪ್ಟಂಬರ್ 2ರಂದು ನೀಡಿದ ಆದೇಶವನ್ನು ಪ್ರಶ್ನಿಸಿ ಖಾಲಿದ್ ಹಾಗೂ ಇತರರು ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಸೆಪ್ಟಂಬರ್ 22ರಂದು ಪೊಲೀಸರಿಗೆ ಕೂಡ ನೋಟಿಸು ಜಾರಿ ಮಾಡಿತ್ತು.
ಸುಪ್ರೀಂ ಕೋರ್ಟ್ನ ವಿಚಾರಣೆ ಸಂದರ್ಭ ಸಾಮಾಜಿಕ ಹೋರಾಟಗಾರರಾದ ಶರ್ಜೀಲ್ ಇಮಾಮ್, ಉಮರ್ ಖಾಲಿದ್ ಹಾಗೂ ಗುಲ್ಫಿಶಾ ಫಾತಿಮಾ 2020ರ ದಿಲ್ಲಿ ಗಲಭೆ ಪ್ರಕರಣದಲ್ಲಿ ತಾವು ನಿರಪರಾಧಿಗಳು. ಹಿಂಸಾಚಾರಕ್ಕೂ ತಮಗೂ ಸಂಬಂಧ ಕಲ್ಪಿಸುವ ಯಾವುದೇ ಪುರಾವೆಗಳು ಇಲ್ಲ ಎಂದು ಹೇಳಿದ್ದಾರೆ.
‘‘751 ಎಫ್ಐಆರ್ ಗಳು ದಾಖಲಾಗಿವೆ. ನನ್ನ ವಿರುದ್ಧ 1 ಎಫ್ಐಆರ್ ಮಾತ್ರ ದಾಖಲಾಗಿದೆ. ಇದನ್ನೂ ಪಿತೂರಿ ಎಂದು ಕರೆದರೆ, ಅದು ಆಶ್ಚರ್ಯಕರ’’,ಎಂದು ಖಾಲಿದ್ ಹೇಳಿದ್ದಾರೆ.
ಖಾಲಿದ್ ಅವರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಗಲಭೆಗಳು ನಡೆದಾಗ ನನ್ನ ಕಕ್ಷಿದಾರರ ದಿಲ್ಲಿಯಲ್ಲಿ ಇರಲಿಲ್ಲ. ಆದುದರಿಂದ ಅವರ ಮೇಲೆ ಆರೋಪ ಹೊರಿಸುವುದು ಹೇಗೆ ಎಂದು ಪ್ರಶ್ನಿಸಿದರು. ಅಲ್ಲದೆ, ಅವರಿಗೂ ಹಿಂಸಾಚಾರಕ್ಕೂ ಸಂಬಂಧ ಕಲ್ಪಿಸಲು ಅವರಲ್ಲಿ ಹಣ, ಶಸ್ತ್ರಾಸ್ತ್ರ, ಭೌತಿಕ ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದರು.
ಫಾತಿಮಾ ಅವರ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ, ಅವರು 2020 ಎಪ್ರಿಲ್ 11ರಿಂದ 5 ವರ್ಷ 5 ತಿಂಗಳಿಗೂ ಅಧಿಕ ಕಾಲ ಕಸ್ಟಡಿಯಲ್ಲಿ ಇದ್ದಾರೆ ಎಂದರು. 2020 ಸೆಪ್ಟಂಬರ್ 16ರಂದು ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಪ್ರತಿ ವರ್ಷ ಪೂರಕ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗುತ್ತಿದೆ. ಈ ಆರೋಪ ಪಟ್ಟಿಗಳನ್ನು ಸಲ್ಲಿಸುವ ಪ್ರಕ್ರಿಯೆ ಶಾಶ್ವತವಾಗಿ ಮುಂದುವರಿಯಬಹುದೇ? ಎಂದು ಅವರು ಪ್ರಶ್ನಿಸಿದರು.
ಇಮಾಮ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾತ್ ದವೆ, 2014 ಸೆಪ್ಟಂಬರ್ ವರೆಗೆ ಪೊಲೀಸರು ಪೂರಕ ಆರೋಪ ಪಟ್ಟಿಗಳನ್ನು ಸಲ್ಲಿಸುತ್ತಲೇ ಇದ್ದರು. ಅಂದರೆ, ತನಿಖೆ ನಾಲ್ಕು ವರ್ಷಗಳ ಕಾಲ ನಡೆದಿದೆ. ಆರೋಪಿಗಳಿಂದ 2024ರ ವರೆಗೆ ಯಾವುದೇ ವಿಳಂಬವಾಗಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದಿದ್ದಾರೆ.







