ನಿಗದಿತವಲ್ಲದ ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಆಹಾರ: ಸರಕಾರಿ ಉದ್ಯೋಗಿಗಳಿಗೆ ಸುಪ್ರೀಂ ಕೋರ್ಟ್ ತರಾಟೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ,ನ.3: ಆಹಾರ ನೀಡಿಕೆಗಾಗಿ ನಿಗದಿತ ಸ್ಥಳಗಳ ಕುರಿತು ತನ್ನ ನಿರ್ದೇಶನಗಳನ್ನು ಸ್ಪಷ್ಟವಾಗಿ ನಿರ್ಲಕ್ಷಿಸಿ ಬೀದಿನಾಯಿಗಳಿಗೆ ಆಹಾರವನ್ನು ನೀಡಿ, ಅವುಗಳನ್ನು ಉತ್ತೇಜಿಸುವ ಮೂಲಕ ಸರಕಾರಿ ಕಚೇರಿಗಳ ನೌಕರರಿಂದ ತನ್ನ ಆದೇಶದ ಉಲ್ಲಂಘನೆಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಗಂಭೀರವಾಗಿ ಪರಿಗಣಿಸಿದೆ. ಬೀದಿನಾಯಿ ಕಡಿತ ಘಟನೆಗಳ ಮೇಲೆ ನಿಗಾಯಿರಿಸಿರುವ ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು,ಆದೇಶಗಳನ್ನು ಹೊರಡಿಸಲು ವಿಷಯವನ್ನು ಶುಕ್ರವಾರಕ್ಕೆ ಮುಂದೂಡಿತು.
ಬೀದಿನಾಯಿಗಳಿಗೆ ಆಹಾರವನ್ನು ನೀಡಿ ಪ್ರದೇಶದಲ್ಲಿ ‘ಅವುಗಳನ್ನು ಉತ್ತೇಜಿಸುತ್ತಿರುವ ಉದ್ಯೋಗಿಗಳಿರುವ ಸರಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಂಬಂಧಿಸಿದಂತೆ ನಾವು ನಿರ್ದೇಶನಗಳನ್ನು ಹೊರಡಿಸಲಿದ್ದೇವೆ’ ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು ಹೇಳಿತು.
ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಕೇರಳ ಹೊರತುಪಡಿಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ತನ್ನ ಹಿಂದಿನ ಆದೇಶವನ್ನು ಪಾಲಿಸದಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ತನ್ನ ಮುಂದೆ ಖುದ್ದಾಗಿ ಹಾಜರಾಗುವಂತೆ ಅ.27ರಂದು ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿತ್ತು.
ಸರ್ವೋಚ್ಚ ನ್ಯಾಯಾಲಯವು ಕಳೆದ ಆಗಸ್ಟ್ನಲ್ಲಿ ಪ್ರಾಣಿಗಳ ಜನನ ನಿಯಂತ್ರಣ(ಎಬಿಸಿ) ನಿಯಮಗಳ ಅನುಷ್ಠಾನದ ಕುರಿತು ಮಾಹಿತಿಯನ್ನು ಕೇಳಿತ್ತು. ಆದರೆ ಮೂರು ತಿಂಗಳುಗಳು ಕಳೆದರೂ ಪಶ್ಚಿಮ ಬಂಗಾಳ,ತೆಲಂಗಾಣ ಮತ್ತು ದಿಲ್ಲಿ ಮಹಾನಗರ ಪಾಲಿಕೆ ಹೊರತುಪಡಿಸಿ ಯಾವುದೇ ರಾಜ್ಯವು ಉತ್ತರವನ್ನು ಸಲ್ಲಿಸಿರಲಿಲ್ಲ. ಕೇರಳದ ಮುಖ್ಯ ಕಾರ್ಯದರ್ಶಿಗಳು ಮಾತ್ರ ವೈಯಕ್ತಿಕ ಹಾಜರಿಯಿಂದ ವಿನಾಯಿತಿ ಕೋರಿದ್ದು, ಸೋಮವಾರ ರಾಜ್ಯದ ಪರವಾಗಿ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ನಾಯಿ ಕಡಿತದ ಸರಣಿ ಘಟನೆಗಳ ನಂತರ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದ ಸುದ್ದಿ ವರದಿಯ ಆಧಾರದಲ್ಲಿ ಜು.28ರಂದು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಈ ವೇಳೆ ಎಬಿಸಿ ನಿಯಮಗಳಡಿ ಪ್ರಾಣಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳುವ ಶಾಸನಬದ್ಧ ಆದೇಶವನ್ನು ಸಮತೋಲನಗೊಳಿಸಲು ಒಲವನ್ನು ಅದು ವ್ಯಕ್ತಪಡಿಸಿತು. ಈ ನಿಯಮಗಳ ಪ್ರಕಾರ ಮುನ್ಸಿಪಲ್ ಸಂಸ್ಥೆಗಳು ಬೀದಿನಾಯಿಗಳನ್ನು ಸಾಮೂಹಿಕವಾಗಿ ಸೆರೆ ಹಿಡಿಯುವ ಬದಲು ಅವುಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಮತ್ತು ಲಸಿಕೆ ನೀಡಿಕೆ ಕಾರ್ಯಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಮಧ್ಯಪ್ರದೇಶದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನ್ಯಾಯಾಲಯವು ಅ.27ರಂದು ಹೊರಡಿಸಿದ್ದ ಆದೇಶಕ್ಕೆ ಅನುಗುಣವಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಉತ್ತರಗಳನ್ನು ಸಲ್ಲಿಸಿವೆ ಎಂದು ಪೀಠಕ್ಕೆ ತಿಳಿಸಿದರು.
‘ನಾಯಿ ಕಡಿತ ಘಟನೆಗಳ ಕುರಿತು ನಿರ್ದೇಶನಗಳನ್ನು ನೀಡಲು ನಾವು ಪ್ರಯತ್ನಿಸುತ್ತೇವೆ’ ಎಂದು ನ್ಯಾಯಾಲಯವು ಹೇಳಿತು. ತನ್ನ ನಿರ್ದೇಶನಗಳ ಹೊರತಾಗಿಯೂ ನಾಯಿ ಕಡಿತ ಘಟನೆಗಳು ಇನ್ನೂ ನಡೆಯುತ್ತಿವೆ ಮತ್ತು ಇದು ಜಾಗತಿಕ ವೇದಿಕೆಯಲ್ಲಿ ದೇಶಕ್ಕೆ ಅಪಖ್ಯಾತಿಯನ್ನುಂಟು ಮಾಡುತ್ತದೆ ಎಂದು ಹಿಂದೆ ಒಂದು ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಬೆಟ್ಟು ಮಾಡಿತ್ತು.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉತ್ತರಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಉಪಸ್ಥಿತಿಯನ್ನು ಅಗತ್ಯವನ್ನಾಗಿಸಿದ್ದ ತನ್ನ ಹಿಂದಿನ ಆದೇಶಗಳನ್ನು ಪೀಠವು ಕೈಬಿಟ್ಟಿತಾದರೂ, ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ವಿಫಲಗೊಂಡರೆ ಅವರ ಉಪಸ್ಥಿತಿಯು ಅಗತ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿತು.







