ಆನ್ಲೈನ್ ನೀಲಿಚಿತ್ರ ನಿಯಂತ್ರಣ ಕೋರುವ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ, ನ. 3: ಆನ್ಲೈನ್ ನೀಲಿಚಿತ್ರ ನಿಯಂತ್ರಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಮನವಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ನೆರೆಯ ನೇಪಾಳದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲು ತೆಗೆದುಕೊಳ್ಳಲಾಗಿರುವ ಕ್ರಮಗಳ ವಿರುದ್ಧ ಯುವ ಜನತೆ ಬೃಹತ್ ಪ್ರತಿಭಟನೆ ನಡೆಸಿತು ಮತ್ತು ಅದು ಸರಕಾರದ ಪತನಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು.
‘‘ನೇಪಾಳದಲ್ಲಿ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಪ್ರಯತ್ನ ನಡೆಯಿತು ಮತ್ತು ಅದರ ಪರಿಣಾಮವೇನು ಎನ್ನುವುದು ಎಲ್ಲರಿಗೂ ತಿಳಿದಿದೆ’’ ಎಂದು ಮುಖ್ಯ ನ್ಯಾಯಾಧೀಶ ಭೂಷಣ್ ಆರ್. ಗವಾಯಿ ನೇತೃತ್ವದ ಪೀಠ ಹೇಳಿತು. ಆನ್ಲೈನ್ನಲ್ಲಿ ಲಭ್ಯವಿರುವ ನೀಲಿಚಿತ್ರಗಳನ್ನು ನಿಷೇಧಿಸಬೇಕೆಂದು ಕೋರಿ ಬಿ.ಎಲ್. ಜೈನ್ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯನ್ನು ನ್ಯಾಯಪೀಠವು ನಡೆಸುತ್ತಿತ್ತು.
ಈ ವಿಷಯವು ನೀತಿ ರೂಪಕರ ವ್ಯಾಪ್ತಿಗೆ ಬರುತ್ತದೆ ಹಾಗೂ ಸಂಸತ್ ಮತ್ತು ಸರಕಾರ ಈ ವಿಷಯಗಳನ್ನು ಪರಿಶೀಲಿಸಬಹುದಾಗಿದೆ ಎಂದು ನ್ಯಾಯಪೀಠದಲ್ಲಿದ್ದ ಇನ್ನೋರ್ವ ನ್ಯಾಯಾಧೀಶ ಕೆ. ವಿನೋದ್ ಚಂದ್ರನ್ ಹೇಳಿದರು.
‘‘ಇದು ನೀತಿ ರೂಪಕರ ವ್ಯಾಪ್ತಿಯಲ್ಲಿ ಬರುತ್ತದೆ. ನೀತಿ ರೂಪಕರಿಗೆ ನೀವು ಮನವಿ ಮಾಡುವುದು ಉತ್ತಮ. ನಾವು ಇದನ್ನು ಪುರಸ್ಕರಿಸಲು ಸಾಧ್ಯವಿಲ್ಲ’’ ಎಂದು ಹೇಳಿದ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು.





