ಎಸ್ಐಆರ್ ಪ್ರಶ್ನಿಸಿ ಹೊಸ ಅರ್ಜಿ | ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | Photo Credit : sci.gov.in
ಹೊಸದಿಲ್ಲಿ, ನ. 21: ಕೇರಳ, ಉತ್ತರಪ್ರದೇಶ ಸೇರಿದಂತೆ ಬಹು ರಾಜ್ಯಗಳಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಶ್ನಿಸಿದ ಹೊಸ ಅರ್ಜಿಗಳ ಗುಚ್ಛವನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ.
ಇತ್ತೀಚೆಗೆ ಸಲ್ಲಿಸಲಾದ ಎಲ್ಲಾ ಹೊಸ ಅರ್ಜಿಗಳ ಕುರಿತಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಎಸ್ವಿಎನ್ ಭಟ್ಟಿ ಹಾಗೂ ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠ ಭಾರತದ ಚುನಾವಣಾ ಆಯೋಗಕ್ಕೆ ನೋಟಿಸು ನೀಡಿದೆ.
ಕೇರಳದ ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಈ ವಿಷಯದ ಬಗ್ಗೆ ತುರ್ತು ವಿಚಾರಣೆ ನಡೆಸಬೇಕಾದ ಅಗತ್ಯತೆ ಇದೆ ಎಂದು ಹೇಳಿದರು. ಎಸ್ಐಆರ್ ಪ್ರಕ್ರಿಯೆಯು ಮುಂಬರುವ ಚುನಾವಣೆಗಳ ಮೇಲೆ ಪ್ರಭಾವ ಬೀರಬಹುದು ಎಂದು ಅವರು ತಿಳಿಸಿದರು.
ಈ ಕಳವಳಗಳನ್ನು ಗಣನೆಗೆ ತೆಗೆದುಕೊಂಡ ಪೀಠ ಕೇರಳಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನ. 26ಕ್ಕೆ ನಿಗದಿಪಡಿಸಿತು. ಇತರ ರಾಜ್ಯಗಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ಅರ್ಜಿಗಳನ್ನು ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಆಲಿಸಲಾಗುವುದು ಎಂದು ಹೇಳಿತು.
ರಾಷ್ಟ್ರವ್ಯಾಪಿ ಎಸ್ಐಆರ್ ಅನ್ನು ಪ್ರಶ್ನಿಸುವ ಹಲವು ಅರ್ಜಿಗಳು ಈಗಾಗಲೇ ಸುಪ್ರೀಂ ಕೋರ್ಟ್ ನ ಮುಂದಿವೆ.







