ದ್ವೇಷ ಭಾಷಣದ ಪ್ರತಿಯೊಂದೂ ಘಟನೆಯ ಮೇಲ್ವಿಚಾರಣೆ ಮಾಡಲ್ಲ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : sci.gov.in
ಹೊಸದಿಲ್ಲಿ,ನ.25: ಶಾಸಕಾಂಗ ಕ್ರಮಗಳು, ಪೋಲಿಸ್ ಠಾಣೆಗಳು ಮತ್ತು ಹೈಕೋರ್ಟ್ ಗಳು ಈಗಾಗಲೇ ಅಸ್ತಿತ್ವದಲ್ಲಿರುವುದರಿಂದ ದೇಶಾದ್ಯಂತ ದ್ವೇಷ ಭಾಷಣದ ಪ್ರತಿಯೊಂದೂ ಘಟನೆಯ ಕುರಿತು ಕಾನೂನು ರೂಪಿಸಲು ಅಥವಾ ಮೇಲ್ವಿಚಾರಣೆಯನ್ನು ನಡೆಸಲು ತಾನು ಒಲವು ಹೊಂದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಿಳಿಸಿದೆ.
ನಿರ್ದಿಷ್ಟ ಸಮುದಾಯವೊಂದನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಿಷ್ಕರಿಸಬೇಕೆಂಬ ಕರೆಗಳ ವಿಷಯವನ್ನು ಎತ್ತಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಸಂದೀಪ ಮೆಹ್ತಾ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
‘ಈ ಅರ್ಜಿಯ ನೆಪದಲ್ಲಿ ನಾವು ಯಾವುದೇ ಕಾನೂನನ್ನು ರೂಪಿಸುವುದಿಲ್ಲ. ದೇಶದಲ್ಲಿ ಎಲ್ಲಿಯೋ ನಡೆಯುವ ಪ್ರತಿಯೊಂದೂ ಸಣ್ಣ ಘಟನೆಯ ಬಗ್ಗೆ ಕಾನೂನು ರೂಪಿಸಲು ಅಥವಾ ಮೇಲ್ವಿಚಾರಣೆಯನ್ನು ನಡೆಸಲು ನಾವು ಒಲವು ಹೊಂದಿಲ್ಲ. ಅದಕ್ಕಾಗಿ ಪೋಲಿಸ್ ಠಾಣೆಗಳು, ಹೈಕೋರ್ಟ್ಗಳು,ಶಾಸಕಾಂಗ ಕ್ರಮಗಳು ಈಗಾಗಲೇ ಅಸ್ತಿತ್ವದಲ್ಲಿವೆ ’ ಎಂದು ಪೀಠವು ಹೇಳಿತು.
ಆರಂಭದಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ದೂರಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು.
ದೇಶಾದ್ಯಂತ ಇಂತಹ ಎಲ್ಲ ಪ್ರಕರಣಗಳ ಮೇಲ್ವಿಚಾರಣೆಯನ್ನು ಈ ನ್ಯಾಯಾಲಯವು ಮುಂದುವರಿಸಲು ಹೇಗೆ ಸಾಧ್ಯ? ನೀವು ಅಧಿಕಾರಿಗಳನ್ನು ಸಂಪರ್ಕಿಸಿ. ಅವರು ಕ್ರಮವನ್ನು ತೆಗೆದುಕೊಳ್ಳಲಿ. ಇಲ್ಲದಿದ್ದರೆ ನೀವು ಹೈಕೋರ್ಟ್ಗೆ ಹೋಗಿ ಎಂದು ಪೀಠವು ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು.
ದ್ವೇಷ ಭಾಷಣದ ವಿಷಯವನ್ನು ಎತ್ತಿರುವ ಬಾಕಿ ಇರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದೇನೆ. ಆರ್ಥಿಕ ಬಹಿಷ್ಕಾರಕ್ಕಾಗಿ ನೀಡಲಾಗುತ್ತಿರುವ ಕರೆಗಳನ್ನು ನ್ಯಾಯಾಲಯದ ಗಮನಕ್ಕೆ ತರಲು ಕೆಲವು ಹೆಚ್ಚುವರಿ ನಿದರ್ಶನಗಳನ್ನು ಉಲ್ಲೇಖಿಸುತ್ತಿದ್ದೇನೆ ಎಂದು ವಕೀಲರು ತಿಳಿಸಿದರು.
ಕೆಲವು ವ್ಯಕ್ತಿಗಳು ಇಂತಹ ಕರೆಗಳನ್ನು ನೀಡಿದ್ದಾರೆ ಎಂದು ಪೀಠವು ಬೆಟ್ಟು ಮಾಡಿದಾಗ ವಕೀಲರು, ಕೆಲವು ಜನಪ್ರತಿನಿಧಿಗಳೂ ಸಾರ್ವಜನಿಕವಾಗಿ ಇಂತಹ ಕರೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,‘ಸಾರ್ವಜನಿಕ ಹಿತಾಸಕ್ತಿಯು ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿರಲು ಸಾಧ್ಯವಿಲ್ಲ. ಎಲ್ಲ ಧರ್ಮಗಳಲ್ಲಿಯೂ ತೀವ್ರವಾದ ದ್ವೇಷ ಭಾಷಣಗಳು ನಡೆಯುತ್ತಿವೆ. ಆ ವಿವರಗಳನ್ನು ನಾನು ಅರ್ಜಿದಾರರಿಗೆ ನೀಡುತ್ತೇನೆ. ಅವರು ಅವುಗಳನ್ನೂ ಸೇರಿಸಿಕೊಳ್ಳಲಿ ಮತ್ತು ಸರ್ವ ಧರ್ಮ ಆಧಾರದಲ್ಲಿ ತನ್ನ ಸಾರ್ವಜನಿಕ ಹಿತಾಸಕ್ತಿಯ ಹೋರಾಟವನ್ನು ನಡೆಸಲಿ’ ಎಂದು ಹೇಳಿದರು.
ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳದ್ದರಿಂದ ತಾನು ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇನೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.
ಸೂಕ್ತ ಕಾರ್ಯವಿಧಾನಗಳು ಅಸ್ತಿತ್ವದಲ್ಲಿವೆ ಮತ್ತು ಕಾನೂನು ಒದಗಿಸುವ ಯಾವುದೇ ಮಾರ್ಗವನ್ನು ನೀವು ಬಳಸಬಹುದು ಎಂದು ಪೀಠವು ಅವರಿಗೆ ಸೂಚಿಸಿತು.
ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿದ್ದರೆ ಇಂತಹ ವಿಷಯಗಳನ್ನು ಹೈಕೋರ್ಟ್ಗಳು ನೋಡಿಕೊಳ್ಳುತ್ತವೆ ಎಂದೂ ಪೀಠವು ತಿಳಿಸಿತು.







