ಅಂಗವಿಕಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು: ಕಠಿಣ ಕಾನೂನು ತರಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ,ನ.27: ಅಂಗವಿಕಲ ವ್ಯಕ್ತಿಗಳ ಘನತೆಯನ್ನು ರಕ್ಷಿಸಲು ಕಠಿಣ ಕಾನೂನಿನ ಅಗತ್ಯವನ್ನು ಎತ್ತಿ ತೋರಿಸಿರುವ ಸರ್ವೋಚ್ಚ ನ್ಯಾಯಾಲಯವು, ಅಂಗವೈಕಲ್ಯ ಮತ್ತು ಅಪರೂಪದ ಆನುವಂಶಿಕ ಅಸ್ವಸ್ಥತೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಅಪಹಾಸ್ಯ ಮಾಡುವ ಅವಮಾನಕಾರಿ ಹೇಳಿಕೆಗಳನ್ನು ದಂಡನೀಯ ಅಪರಾಧವನ್ನಾಗಿಸಲು ಎಸ್ಸಿ-ಎಸ್ಟಿ ಕಾಯ್ದೆಯ ಮಾದರಿಯಲ್ಲಿ ಶಾಸನವೊಂದನ್ನು ರೂಪಿಸುವುದನ್ನು ಪರಿಗಣಿಸುವಂತೆ ಗುರುವಾರ ಕೇಂದ್ರಕ್ಕೆ ಸೂಚಿಸಿದೆ.
ಎಸ್ಸಿ/ಎಸ್ಟಿ (ದೌರ್ಜನ್ಯ) ತಡೆ ಕಾಯ್ದೆಯು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದ ವ್ಯಕ್ತಿಗಳ ವಿರುದ್ಧ ಜಾತಿ ನಿಂದನೆ,ತಾರತಮ್ಯ,ಅವಹೇಳನ ಮತ್ತು ಹಿಂಸಾಚಾರವನ್ನು ಅಪರಾಧೀಕರಿಸಿದೆ ಮತ್ತು ಇಂತಹ ಅಪರಾಧಗಳನ್ನು ಜಾಮೀನು ರಹಿತವಾಗಿಸಿದೆ.
ಜಾತಿ ನಿಂದನೆಯನ್ನು ಅಪರಾಧೀಕರಿಸಿರುವ ಎಸ್ಸಿ/ಎಸ್ಟಿ ಕಾಯ್ದೆಯ ಮಾದರಿಯಲ್ಲಿ ಕಠಿಣ ಕಾನೂನನ್ನು ನೀವೇಕೆ ತರಬಾರದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ.ಜಾಯಮಾಲ್ಯಾ ಬಾಗ್ಚಿ ಅವರನ್ನೊಳಗೊಂಡ ಪೀಠವು ಕೇಂದ್ರವನ್ನು ಪ್ರಶ್ನಿಸಿತು.
ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಪೀಠದ ಅವಲೋಕನವನ್ನು ಶ್ಲಾಘಿಸಿದರು. ಹಾಸ್ಯವು ಯಾವುದೇ ವ್ಯಕ್ತಿಯ ಘನತೆಗೆ ಧಕ್ಕೆಯನ್ನುಂಟು ಮಾಡಬಾರದು ಎಂದು ಅವರು ಹೇಳಿದರು.
ಆನ್ಲೈನ್ ವೇದಿಕೆಗಳಲ್ಲಿ ಅಶ್ಲೀಲ, ಅವಮಾನಕಾರಿ ಮತ್ತು ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು ‘ತಟಸ್ಥ,ಸ್ವತಂತ್ರ ಮತ್ತು ಸ್ವಾಯತ್ತ’ ಸಂಸ್ಥೆಯೊಂದರ ಅಗತ್ಯವಿದೆ ಎಂದೂ ಪೀಠವು ಹೇಳಿತು.
ಅಂಗವಿಕಲ ವ್ಯಕ್ತಿಗಳ ವಿರುದ್ಧ ಅವಮಾನಕಾರಿ ಹೇಳಿಕೆಗಳು ಮತ್ತು ಅಪಹಾಸ್ಯವನ್ನು ತಡೆಯಲು ಮಾರ್ಗಸೂಚಿಗಳನ್ನು ರೂಪಿಸುವ ಅಥವಾ ಕಾರ್ಯವಿಧಾನವೊಂದನ್ನು ಜಾರಿಗೊಳಿಸುವ ವಿಷಯ ಕುರಿತಂತೆ ಪ್ರಸಾರ ಸಚಿವಾಲಯವು, ಇದಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ರೂಪಿಸಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿತು.
ಮಾರ್ಗಸೂಚಿಗಳನ್ನು ಸಾರ್ವಜನಿಕ ಚರ್ಚೆಗೆ ಮಂಡಿಸುವಂತೆ ಸಚಿವಾಲಯಕ್ಕೆ ಸೂಚಿಸಿದ ಪೀಠವು, ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.
ಅಪರೂಪದ ಸ್ಪೈನಲ್ ಮಸ್ಕ್ಯುಲರ್ ಅಟ್ರಾಫಿ (ಎಸ್ಎಂಎ) ಅಥವಾ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗಾಗಿ ಕೆಲಸ ಮಾಡುತ್ತಿರುವ ಎಸ್ಎಂಎ ಕ್ಯೂರ್ ಫೌಂಡೇಷನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ‘ಇಂಡಿಯಾಸ್ ಗಾಟ್ ಲೇಟೆಂಟ್’ ಯುಟ್ಯೂಬ್ ಕಾರ್ಯಕ್ರಮದ ನಿರೂಪಕ ಸಮಯ ರೈನಾ ಹಾಗೂ ಇತರ ಸಾಮಾಜಿಕ ಮಾಧ್ಯಮ ಪ್ರಭಾವಿಗಳಾದ ವಿಪುನ್ ಗೋಯಲ್, ಬಲರಾಜ ಪರಮಜೀತ್ ಸಿಂಗ್ ಘಾಯ್,ಸೋನಾಲಿ ಠಕ್ಕರ್ ಮತ್ತು ನಿಶಾಂತ ತನ್ವರ್ ಅವರು ಅಂಗವಿಕಲ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಮಾಡಿದ್ದ ಜೋಕ್ಗಳನ್ನು ಅರ್ಜಿಯಲ್ಲಿ ಎತ್ತಿ ತೋರಿಸಲಾಗಿದೆ. ಅಂಗವಿಕಲರ ಕುರಿತು ಸಂವೇದನಾರಹಿತ ಹೇಳಿಕೆಗಳಿಗಾಗಿ ಅವರ ವಿರುದ್ಧ ಕ್ರಮಕ್ಕೆ ಅರ್ಜಿಯು ಆಗ್ರಹಿಸಿದೆ.
►ದಂಡನೀಯವಲ್ಲ,ಸಾಮಾಜಿಕ ಹೊರೆ
ಪ್ರೇರಣಾದಾಯಕ ಯಶಸ್ಸು ಸಾಧಿಸಿರುವ ಅಂಗವಿಕಲ ವ್ಯಕ್ತಿಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ತಮ್ಮ ವೇದಿಕೆಗಳಲ್ಲಿ ಆಯೋಜಿಸುವಂತೆ ಸರ್ವೋಚ್ಚ ನ್ಯಾಯಾಲಯವು ರೈನಾ ಮತ್ತು ಇತರರಿಗೆ ನಿರ್ದೇಶನ ನೀಡಿತು. ಅಂಗವಿಕಲರು, ವಿಶೇಷವಾಗಿ ಎಸ್ಎಂಎ ಪೀಡಿತರ ಸಕಾಲಿಕ ಮತ್ತು ಪರಿಣಾಮಕಾರಿ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಈ ಕಾರ್ಯಕ್ರಮಗಳನ್ನು ನಡೆಸಬೇಕು ಎಂದೂ ಅದು ತಿಳಿಸಿತು.
‘ನಾವು ಮುಂದಿನ ವಿಚಾರಣೆ ನಡೆಸುವ ಮುನ್ನ ಇಂತಹ ಕೆಲವು ಸ್ಮರಣೀಯ ಕಾರ್ಯಕ್ರಮಗಳು ನಡೆಯುತ್ತವೆ ಎಂದು ನಾವು ನಿರೀಕ್ಷಿಸಿದ್ದೇವೆ. ಇದು ನಾವು ನಿಮ್ಮ ಮೇಲೆ ಹೇರುತ್ತಿರುವ ಸಾಮಾಜಿಕ ಹೊರೆಯಾಗಿದೆ, ದಂಡನೀಯ ಹೊರೆಯಲ್ಲ. ನೀವು ಸಮಾಜದಲ್ಲಿ ಒಳ್ಳೆಯ ಸ್ಥಾನಗಳಲ್ಲಿರುವ ವ್ಯಕ್ತಿಗಳಾಗಿದ್ದೀರಿ. ನೀವು ಅಷ್ಟೊಂದು ಜನಪ್ರಿಯರಾಗಿದ್ದರೆ ಅದನ್ನು ಇತರರೊಂದಿಗೂ ಹಂಚಿಕೊಳ್ಳಿ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.







