ಆರು ವಕೀಲರನ್ನು ಬದಲಿಸಿದ್ದಕ್ಕಾಗಿ ಜೈಲುಪಾಲಾಗಿದ್ದ ಮಹಿಳೆಯನ್ನು ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | Photo Credit : sci.gov.in
ಹೊಸದಿಲ್ಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವಾಗ ಆರು ಸಲ ತನ್ನ ವಕೀಲರನ್ನು ಬದಲಿಸಿದ್ದಕ್ಕಾಗಿ ಜೈಲುಪಾಲಾಗಿದ್ದ ಮಹಿಳೆಯನ್ನು ಬಿಡುಗಡೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿದ್ದು, ಬಂಧನದ ಆದೇಶವನ್ನು ‘ಖೇದಕರ ಮತ್ತು ಆಘಾತಕಾರಿ’ ಎಂದು ಬಣ್ಣಿಸಿದೆ.
ಪ್ರಕರಣವು ಮಹಿಳೆಯ ತಾಯಿ ನೀಡಿದ್ದ ಏಳು ಲಕ್ಷ ರೂ. ಮತ್ತು 5.02 ಲಕ್ಷ ರೂ.ಗಳ ಎರಡು ಚೆಕ್ಗಳು ಅಮಾನ್ಯಗೊಂಡಿದ್ದಕ್ಕೆ ಸಂಬಂಧಿಸಿದೆ. ವಿಚಾರಣಾ ನ್ಯಾಯಾಲಯವು ತಾಯಿ ಮತ್ತು ಮಗಳು ಇಬ್ಬರನ್ನೂ ದೋಷಿಗಳು ಎಂದು ಘೋಷಿಸಿ ಜೈಲುಶಿಕ್ಷೆಯನ್ನು ವಿಧಿಸಿತ್ತು. ನಂತರ ಮಹಿಳೆ ಫರೀದಾಬಾದ್ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದಳು. ಈ ಮೇಲ್ಮನವಿ ಕಳೆದ ಎಂಟು ವರ್ಷಗಳಿಂದಲೂ ಬಾಕಿಯಿದೆ ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ಈ ನಡುವೆ ಮೇಲ್ಮನವಿ ಬಾಕಿಯಿದ್ದರೂ ಮಹಿಳೆ ಆರು ಸಲ ತನ್ನ ವಕೀಲರನ್ನು ಬದಲಿಸಿದ್ದನ್ನು ಅಸಹಕಾರ ಎಂದು ವ್ಯಾಖ್ಯಾನಿಸಿ ತಾಯಿ-ಮಗಳ ಜಾಮೀನು ರದ್ದುಗೊಳಿಸಿದ್ದ ಸೆಷನ್ಸ್ ನ್ಯಾಯಾಲಯವು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಆದೇಶಿಸಿತ್ತು. ತಾಯಿ-ಮಗಳು ಇದನ್ನು ಉಚ್ಚ ನ್ಯಾಯಾಲಯದಲ್ಲಿ ಮತ್ತು ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಈ ನಡುವೆ ತಾಯಿ ನಿಧನರಾಗಿದ್ದು, ಮೇಲ್ಮನವಿ ನ್ಯಾಯಾಲಯವು ಅವರ ಮರಣ ಪ್ರಮಾಣಪತ್ರವನ್ನು ಸ್ವೀಕರಿಸಿಲ್ಲ ಎನ್ನುವುದನ್ನು ನ್ಯಾಯಮೂರ್ತಿಗಳಾದ ಅರವಿಂದ ಕುಮಾರ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು ನ.27ರ ತನ್ನ ಆದೇಶದಲ್ಲಿ ಬೆಟ್ಟು ಮಾಡಿದೆ.
ಪ್ರಮಾಣಪತ್ರದ ಸಿಂಧುತ್ವವನ್ನು ಪರಿಶೀಲಿಸುವಂತೆ ಸೆಷನ್ಸ್ ನ್ಯಾಯಾಲಯವು ಸಂಬಂಧಿಸಿದ ಪೋಲಿಸ್ ಠಾಣಾಧಿಕಾರಿಗೆ ನಿರ್ದೇಶನ ನೀಡಿತ್ತು.
ವಕೀಲರು ನ್ಯಾಯಾಲಯಕ್ಕೆ ನೆರವಾಗದಿದ್ದರೆ ಅಮಿಕಸ್ ಕ್ಯೂರೆಯನ್ನು ನೇಮಕ ಮಾಡುವುದು ಅಥವಾ ಪರ್ಯಾಯ ವಕೀಲರನ್ನು ವ್ಯವಸ್ಥೆ ಮಾಡಲು ಆರೋಪಿಗೆ ಸಮಯಾವಕಾಶ ನೀಡುವುದು ಸರಿಯಾದ ಕ್ರಮವಾಗಿದೆ,ಆಕೆಯನ್ನು ಜೈಲಿಗೆ ಹಾಕುವುದಲ್ಲ ಎಂದು ಪೀಠವು ಹೇಳಿತು.
ಒಂದು ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ನ ಆಧಾರದಲ್ಲಿ ಮಹಿಳೆಯ ಬಿಡುಗಡೆಗೆ ಆದೇಶಿಸಿದ ಸರ್ವೋಚ್ಚ ನ್ಯಾಯಾಲಯವು,ಪ್ರತಿ ವಿಚಾರಣೆ ದಿನಾಂದಂದು, ವಿಶೇಷವಾಗಿ ಈಗಾಗಲೇ ನೀಡಲಾದ ಶಿಕ್ಷೆಯನ್ನು ಅಮಾನತುಗೊಳಿಸಿದ ಬಳಿಕವೂ ಅರ್ಜಿದಾರರು ಹಾಜರಿರಬೇಕು ಎಂದು ಸೆಷನ್ಸ್ ನ್ಯಾಯಾಲಯವು ಒತ್ತಾಯಿಸಿದ್ದು ಖೇದಕರ ಮತ್ತು ಆಘಾತಕಾರಿಯಾಗಿದೆ ಎಂದು ಹೇಳಿತು.







