ಸಿಎಎ ಅಡಿ ಅರ್ಜಿದಾರರಿಗೆ ಪೌರತ್ವ ಸ್ವಯಂಸಿದ್ಧವಲ್ಲ,ಅವರ ಹಕ್ಕು ಕೋರಿಕೆಗಳನ್ನು ಪರಿಶೀಲಿಸಬೇಕು:ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ,ಡಿ.10: ತಾವು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯಡಿ (ಸಿಎಎ) ರಕ್ಷಿತರು ಎಂದು ಹೇಳಿಕೊಳ್ಳುವ ಜನರಿಗೆ ಭಾರತೀಯ ಪೌರತ್ವವು ಸ್ವಯಂಸಿದ್ಧವಲ್ಲ ಮತ್ತು ಅದು ಅವರ ಹಕ್ಕುಕೋರಿಕೆಗಳ ಸತ್ಯಾಸತ್ಯತೆಯನ್ನು ಅವಲಂಬಿಸಿರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಮಂಗಳವಾರ ‘ಆತ್ಮದೀಪ’ ಎನ್ಐಒ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಸೂರ್ಯಕಾಂತ ಮತ್ತು ನ್ಯಾ.ಜಾಯಮಾಲ್ಯಾ ಬಾಗ್ಚಿ ಅವರ ಪೀಠವು ಈ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಸಿಎಎಯಲ್ಲಿನ ತಿದ್ದುಪಡಿ ಮಾಡಲಾದ ನಿಬಂಧನೆಗಳಿಂದಾಗಿ ಈ ದೇಶದ ಪ್ರಜೆಗಳಾಗಲು ಅರ್ಹರಾಗಿದ್ದೇವೆ ಎಂದು ನೀವು ಹೇಳಿಕೊಳ್ಳುತ್ತಿದ್ದೀರಿ. ಆದರೆ ನಿಮಗೆ ಈವರೆಗೆ ಪೌರತ್ವವನ್ನು ನೀಡಲಾಗಿಲ್ಲ. ತಿದ್ದುಪಡಿ ಮಾಡಲಾದ ನಿಬಂಧನೆಗಳು ಪೌರತ್ವವನ್ನು ಕೋರಲು ನಿಮ್ಮ ಪರವಾಗಿ ಕೆಲವು ಜಾರಿಗೊಳಿಸಬಹುದಾದ ಹಕ್ಕುಗಳನ್ನು ನೀಡಿರಬಹುದು,ಆದರೆ ನೀವು ಸಿಎಎ ಅಡಿ ಸೂಚಿತ ನೆರೆಯ ದೇಶದಲ್ಲಿಯ ಯಾವುದೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೇ;ಅಲ್ಪಸಂಖ್ಯಾತರಿಗೆ ಭಾರತಕ್ಕೆ ಬರಲು ಅನುಮತಿಸಲಾಗಿರುವ ದೇಶದ ನಿವಾಸಿಯೇ;ಮತ್ತು ನೀವು ಯಾವ ಆಧಾರದಲ್ಲಿ ಭಾರತಕ್ಕೆ ಬಂದಿದ್ದೀರಿ ಎಂಬಿತ್ಯಾದಿ ಪ್ರತಿಯೊಂದೂ ಶಾಸನಬದ್ಧ ಅಗತ್ಯಗಳನ್ನು ನಿರ್ಧರಿಸಬೇಕು ಎಂದು ಸಿಜೆಐ ಹೇಳಿದರು.
ಆರು ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ‘ಜಾರಿಗೊಳಿಸಬಹುದಾದ ಹಕ್ಕುಗಳನ್ನು’ ನೀಡುವುದನ್ನು ಪ್ರತಿಪಾದಿಸಿರುವ ಬದಲಾವಣೆಗಳನ್ನು ಸಿಎಎಗೆ ತಂದಿದ್ದರೂ,ಇಂತಹ ಪ್ರತಿಯೊಂದೂ ಹಕ್ಕು ಕೋರಿಕೆಯನ್ನು ಅಧಿಕಾರಿಗಳು ಪರಿಶೀಲಿಸಬೇಕಾಗುತ್ತದೆ ಮತ್ತು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯವು ಹೇಳಿತು.
ನೆರೆಯ ಮೂರು ದೇಶಗಳಿಂದ,ವಿಶೇಷವಾಗಿ ಬಾಂಗ್ಲಾದೇಶದಿಂದ ಪರಾರಿಯಾಗಿ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರು ಪಶ್ಚಿಮ ಬಂಗಾಳದಲ್ಲಿ ವಾಸವಾಗಿದ್ದಾರೆ ಮತ್ತು ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್ಐಆರ್) ತಮ್ಮನ್ನು ದೇಶರಹಿತರನ್ನಾಗಿಸುತ್ತದೆ ಎಂಬ ಭೀತಿಯಲ್ಲಿದ್ದಾರೆ ಎಂದು ಅರ್ಜಿದಾರರು ಹೇಳಿದ್ದರು.
ಅಧಿಕಾರಿಗಳು ಪೌರತ್ವ ಪ್ರಮಾಣಪತ್ರ ನೀಡಿಕೆಯನ್ನು ವಿಳಂಬಿಸಿದ್ದಾರೆ ಮತ್ತು ಪ್ರಸ್ತುತ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಸ್ವೀಕೃತಿ ರಸೀದಿಗೆ ಮಾನ್ಯತೆ ನೀಡದಿರುವುದು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.
ಸರಕಾರವು ಕಾನೂನನ್ನು ಮಾಡಿದ್ದರೆ ಅದನ್ನು ಜಾರಿಗೊಳಿಸಲು ಅನುಸರಣಾ ಕಾರ್ಯವಿಧಾನವು ಇರುತ್ತದೆ ಎಂದು ಹೇಳಿದ ಸಿಜೆಐ,ವಲಸಿಗರು ಸೂಕ್ತ ಪ್ರಕ್ರಿಯೆಯ ಮೂಲಕ ಸಹಜ ಪ್ರಜೆಗಳಾದ ನಂತರ ಮತದಾರರ ಪಟ್ಟಿಯಲ್ಲಿ ನೋಂದಣಿಗಾಗಿ ಶಾಸನಬದ್ಧ ಯೋಜನೆಯಡಿ ಅರ್ಜಿ ಸಲ್ಲಿಸಬಹುದು ಎಂದರು.







