1996ರ ಮಾದಕ ವಸ್ತು ಇರಿಸಿದ ಪ್ರಕರಣ | ಸಂಜೀವ್ ಭಟ್ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸಂಜೀವ್ ಭಟ್ | Photo Credit : PTI
ಹೊಸದಿಲ್ಲಿ, ಡಿ. 11: 1996ರ ಮಾದಕ ವಸ್ತು ಇರಿಸಿದ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ವಿಧಿಸಲಾದ 20 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿರಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಇದರಿಂದ ಸಂಜೀವ್ ಭಟ್ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ.
ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ವಿಜಯ್ ಬಿಷ್ಣೋಯಿ ನೇತೃತ್ವದ ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರ ಪೀಠ, ‘‘ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿದ ಅವರ ಅರ್ಜಿಯನ್ನು ಪರಿಗಣಿಸಲು ನಾವು ಸಿದ್ಧರಿಲ್ಲ’’ ಎಂದು ಹೇಳಿತು.
ಗುಜರಾತ್ ನ್ಯಾಯಾಲಯ ಕಳೆದ ವರ್ಷ ಎನ್ಡಿಪಿಎಸ್ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ನಿಯಮಗಳ ಅಡಿಯಲ್ಲಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಂಜೀವ್ ಭಟ್ ಅವರು ಮೇಲ್ಮನವಿ ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು 2018ರಲ್ಲಿ ಬಂಧಿಸಲಾಗಿತ್ತು.
1990ರಲ್ಲಿ ನಡೆದ ಪ್ರಭುದಾಸ್ ವೈಷ್ಣನಿ ಎಂಬವರ ಕಸ್ಟಡಿ ಸಾವಿಗೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಸಂಜೀವ್ ಭಟ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.





