ಉತ್ತರ ಕೊಡಿ; ಪ್ರಕರಣಗಳ ಆಲಿಕೆಯಲ್ಲಿ ಏನೋ ತಪ್ಪು ನಡೆಯುತ್ತಿದೆ: ಮದ್ರಾಸ್ ಹೈಕೋರ್ಟ್ ಗೆ 'ಸುಪ್ರೀಂ' ಸೂಚನೆ

ಸುಪ್ರೀಂಕೋರ್ಟ್ , ಮದ್ರಾಸ್ ಹೈಕೋರ್ಟ್ | Photo Credit : PTI
ಹೊಸದಿಲ್ಲಿ,ಡಿ.12: ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಕರಣಗಳ ಪಟ್ಟಿ ಮಾಡುವಿಕೆ ಹಾಗೂ ಆಲಿಕೆಯಲ್ಲಿ ‘ಏನೋ ತಪ್ಪು ನಡೆಯುತ್ತಿದೆ’ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಪ್ರಕರಣಗಳ ಪಟ್ಟಿ ಮಾಡುವಿಕೆ ಹಾಗೂ ಆಲಿಕೆಗೆ ಸಂಬಂಧಿಸಿದಂತೆ ಪ್ರಸಕ್ತ ಅನುಸರಿಸಲಾಗುತ್ತಿರುವ ನಿಯಮಗಳ ಕುರಿತು ಉತ್ತರವನ್ನು ನೀಡುವಂತೆ ಅದು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಸೂಚಿಸಿದೆ.
ಕರೂರ್ನಲ್ಲಿ ಸೆಪ್ಟೆಂಬರ್ 27ರಂದು ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆಯ ಸಂದರ್ಭ ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಹಾಗೂ ವಿಜಯ್ ಬಿಷ್ಣೋಯಿ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ನಟ ವಿಜಯ್ ಅವರ ಟಿವಿಕೆ ಪಕ್ಷದ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ಮದ್ರಾಸ್ ಹೈಕೋರ್ಟ್ನ ರಿಜಿಸ್ಟ್ರಾರ್ ಅವರನ್ನು ಪ್ರತಿವಾದಿಯನ್ನಾಗಿದ ಸುಪ್ರೀಂಕೋರ್ಟ್ ನ್ಯಾಯಪೀಠವು ಅವರಿಗೂ ನೋಟಿಸ್ ಜಾರಿಗೊಳಿಸಿದೆ. ಹೈಕೋರ್ಟ್ ನಲ್ಲಿ ಅನುಸರಿಸಲಾಗುವ ನಿಯಮಗಳ ಬಗ್ಗೆ ತಾನು ಪರಿಶೀಲಿಸುವುದಾಗಿ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ವಿಶೇಷ ತನಿಖಾ ತಂಡದಿಂದ ಕರೂರ್ ಕಾಲ್ತುಳಿತ ದುರಂತದ ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿರುವುದನ್ನು ಪ್ರಶ್ನಿಸಿ ಟಿವಿಕೆ ಪಕ್ಷ ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ಸುಪ್ರೀಂಕೋರ್ಟ್ ನ್ಯಾಯಪೀಠ ನಡೆಸುತ್ತಿದೆ.
ಅರ್ಜಿದಾರರು ರೋಡ್ ಶೋಗಳನ್ನು ನಡೆಸುವುದಕ್ಕೆ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕೆಂದು ಮಾತ್ರವೇ ಅರ್ಜಿಯಲ್ಲಿ ಕೋರಿದ್ದರು. ಆದರೆ ಕರೂರ್ ಕಾಲ್ತುಳಿತ ಪ್ರಕರಣವನ್ನು SIT ಮೂಲಕ ತನಿಖೆ ನಡೆಸಬೇಕೆಂಬ ಮದ್ರಾಸ್ ಹೈಕೋರ್ಟ್ನ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್ ಎರಡು ವ್ಯತಿರಿಕ್ತ ಆದೇಶಗಳನ್ನು ನೀಡಿರುವುದನ್ನು ಸುಪ್ರೀಂಕೋರ್ಟ್ ಈ ಮೊದಲು ಪ್ರಶ್ನಿಸಿತ್ತು.
ಕರೂರ್ ದುರಂತದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂಬ ಮನವಿಯನ್ನು ಮದ್ರಾಸ್ ಹೈಕೋರ್ಟ್ನ ಮದುರೈ ಪೀಠವು ಈ ಹಿಂದೆ ತಿರಸ್ಕರಿಸಿದ್ದರೆ, ಚೆನ್ನೈ ಪೀಠವು SIT ತನಿಖೆಗೆ ಆದೇಶಿಸಿತ್ತು.
ಸೆಪ್ಟೆಂಬರ್ 27ರಂದು ನಟ, ರಾಜಕಾರಣಿ ವಿಜಯ್ ಭಾಗವಹಿಸಿದ್ದ ತಮಿಳಗ ವೇಟ್ರಿ ಕಳಗಂ ಪಕ್ಷದ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.







