ಸೆಂಗಾರ್ ಜೀವಾವಧಿ ಶಿಕ್ಷೆ ಅಮಾನತು; CBI ಸಲ್ಲಿಸಿದ ಅರ್ಜಿ ಸುಪ್ರೀಂನಿಂದ ಡಿ.29ಕ್ಕೆ ವಿಚಾರಣೆ

ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಡಿ. 28: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯ ಉಚ್ಛಾಟಿತ ಶಾಸಕ ಕುಲ್ ದೀಪ್ ಸಿಂಗ್ ಸೆಂಗಾರ್ ನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ಅಗಸ್ಟಿನ್ ಜಾರ್ಜ್ ಮಸೀಹ ಅವರ ಮೂವರು ಸದಸ್ಯರ ರಜಾಕಾಲದ ಪೀಠ ಈ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಉಚ್ಚ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹಾಗೂ ಅದನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯವಾದಿಗಳಾದ ಅಂಜಲಿ ಪಟೇಲ್ ಹಾಗೂ ಪೂಜಾ ಶಿಲ್ಪಕಾರ್ ಅವರು ಸಲ್ಲಿಸಿದ ಪ್ರತ್ಯೇಕ ಅರ್ಜಿಗಳನ್ನು ಕೂಡ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕುಲ್ ದೀಪ್ ಸಿಂಗ್ ಸೆಂಗಾರ್ ನ ಜೈಲು ಶಿಕ್ಷೆಯನ್ನು ಉಚ್ಚ ನ್ಯಾಯಾಲಯ ಡಿಸೆಂಬರ್ 23ರಂದು ಅಮಾನತುಗೊಳಿಸಿದೆ. ಸೆಂಗಾರ್ ಈಗಾಗಲೇ ಕಾರಾಗೃಹದಲ್ಲಿ 7 ವರ್ಷ 6 ತಿಂಗಳು ಶಿಕ್ಷೆ ಅನುಭವಿಸಿದ್ದಾನೆ ಎಂದು ಅದು ಹೇಳಿದೆ.







