ಉಮರ್ ಖಾಲಿದ್, ಶರ್ಜಿಲ್ ಇಮಾಮ್ಗೆ ಜಾಮೀನು ನಿರಾಕರಣೆ; ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು?

ಉಮರ್ ಖಾಲಿದ್, ಶರ್ಜಿಲ್ ಇಮಾಮ್ | Photo Credit : PTI
ಹೊಸದಿಲ್ಲಿ: 2020ರ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಂ ಅವರಿಗೆ ಜಾಮೀನು ನೀಡಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ. ಇದೇ ವೇಳೆ, ಭಯೋತ್ಪಾದನೆ ಪ್ರಕರಣಗಳಲ್ಲಿ ದೀರ್ಘಕಾಲದ ಜೈಲುವಾಸವು ಜಾಮೀನು ಪಡೆಯಲು ಸಂಪೂರ್ಣ ಅರ್ಹತೆಯಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಖಾಲಿದ್ ಸೆ.13,2020ರಿಂದ ಮತ್ತು ಇಮಾಂ ಜ.28,2020ರಿಂದ ಬಂಧನದಲ್ಲಿದ್ದಾರೆ.
ಆದಾಗ್ಯೂ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು ಸಹ ಆರೋಪಿಗಳಾದ ಗುಲ್ಫಿಶಾ ಫಾತಿಮಾ,ಮೀರಾನ್ ಹೈದರ್,ಶಿಫಾ ಉರ್ ರೆಹಮಾನ್,ಮುಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ಮಂಜೂರು ಮಾಡಿತು.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದ್ದೇನು?
ಪ್ರಾಸಿಕ್ಯೂಷನ್ ನ್ಯಾಯಾಲಯದ ಮುಂದಿರಿಸಿರುವ ದಾಖಲೆಗಳು ಖಾಲಿದ್ ಮತ್ತು ಇಮಾಂ ವಿರುದ್ಧದ ಆರೋಪಗಳನ್ನು ಮೇಲ್ನೋಟಕ್ಕೆ ಪುಷ್ಟೀಕರಿಸುತ್ತವೆ ಎಂದು ಹೇಳಿದ ಪೀಠವು,ಅಪರಾಧದಲ್ಲಿ ಎಲ್ಲ ಏಳೂ ಆರೋಪಿಗಳು ಒಂದೇ ರೀತಿಯ ಪಾತ್ರವನ್ನು ಹೊಂದಿಲ್ಲ. ಕೆಲವು ಆರೋಪಿಗಳು ನಿರ್ವಹಿಸಿರುವ ಪ್ರಮುಖ ಪಾತ್ರಗಳು ಮತ್ತು ಇತರ ಆರೋಪಿಗಳು ನಿರ್ವಹಿಸಿರುವ ಸಹಾಯಕ ಪಾತ್ರದ ನಡುವಿನ ವ್ಯತ್ಯಾಸವನ್ನು ನಿರ್ಲಕ್ಷಿಸುವುದು ತರ್ಕರಹಿತ ನಿರ್ಧಾರಕ್ಕೆ ಕಾರಣವಾಗುತ್ತದೆ. ಖಾಲಿದ್ ಮತ್ತು ಇಮಾಂ ಉಳಿದ ಆರೋಪಿಗಳಿಗೆ ಹೋಲಿಸಿದರೆ ಗುಣಾತ್ಮಕವಾಗಿ ವಿಭಿನ್ನ ಪಾತ್ರ ಹೊಂದಿದ್ದಾರೆ ಎಂದು ಹೇಳಿತು.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯು (ಯುಎಪಿಎ) ಒಂದು ವಿಶೇಷ ಕಾನೂನಾಗಿ ಯಾವ ಪರಿಸ್ಥಿತಿಗಳಲ್ಲಿ ವಿಚಾರಣೆಗೂ ಮುನ್ನ ಜಾಮೀನು ನೀಡಬಹುದು ಎನ್ನುವುದರ ಕುರಿತು ಶಾಸನಾತ್ಮಕ ವಿವೇಚನೆಯನ್ನು ಪ್ರತಿನಿಧಿಸುತ್ತದೆ ಎನ್ನುವುದನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ವಿಚಾರಣೆಯಲ್ಲಿ ವಿಳಂಬಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಪರ ವಕೀಲರು ಮಂಡಿಸಿದ ವಾದಗಳ ಕುರಿತಂತೆ ನ್ಯಾಯಾಲಯವು, ಯುಎಪಿಎ ಅಡಿ ವಿಚಾರಣೆಗಳಲ್ಲಿ ವಿಳಂಬವು ಶಾಸನಬದ್ಧ ಸುರಕ್ಷತಾ ಕ್ರಮಗಳನ್ನು ಬದಲಿಸುವ ‘ಟ್ರಂಪ್ ಕಾರ್ಡ್’ ಆಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಿತು.
ಯುಎಪಿಎಯ ಕಲಂ 43ಡಿ(5) ಜಾಮೀನು ನೀಡಿಕೆಯಲ್ಲಿ ಸಾಮಾನ್ಯ ನಿಬಂಧನೆಗಳಿಗಿಂತ ಭಿನ್ನವಾಗಿದೆ. ಅದು ನ್ಯಾಯಾಂಗದ ಪರಿಶೀಲನೆಯನ್ನು ಹೊರತುಪಡಿಸುವುದಿಲ್ಲ ಅಥವಾ ಪೂರ್ವನಿಯೋಜಿತವಾಗಿ ಜಾಮೀನು ನಿರಾಕರಣೆಯನ್ನು ಕಡ್ಡಾಯಗೊಳಿಸುವುದಿಲ್ಲ ಎಂದು ತಿಳಿಸಿದ ಪೀಠವು,ಪ್ರಾಸಿಕ್ಯೂಷನ್ ಸಾಕ್ಷ್ಯವನ್ನು ಅಂಗೀಕರಿಸಲಾಗಿದೆಯೇ,ಮೇಲ್ನೋಟಕ್ಕೆ ಪ್ರಕರಣವನ್ನು ಒಳಗೊಂಡಿದೆಯೇ ಮತ್ತು ಆರೋಪಿಗಳ ನಿರ್ದಿಷ್ಟ ಪಾತ್ರವು ಶಾಸನಬದ್ಧ ಮಿತಿಯನ್ನು ದಾಟಿದೆಯೇ ಎನ್ನುವ ಬಗ್ಗೆ ನ್ಯಾಯಾಲಯವು ರಚನಾತ್ಮಕ ವಿಚಾರಣೆಯನ್ನು ನಡೆಸಬೇಕಾಗುತ್ತದೆ ಎಂದು ಹೇಳಿತು.
ರಕ್ಷಣೆಯಲ್ಲಿರುವ ಪ್ರಕರಣದ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಬಳಿಕ ಅಥವಾ ಈ ಆದೇಶದ ಒಂದು ವರ್ಷದ ನಂತರ ಖಾಲಿದ್ ಮತ್ತು ಇಮಾಂ ಅವರು ಜಾಮೀನು ಕೋರಿ ಮತ್ತೆ ಅರ್ಜಿಸಲ್ಲಿಸಲು ಸ್ವತಂತ್ರರಾಗಿದ್ದಾರೆ ಎಂದು ಪೀಠವು ಸ್ಪಷ್ಟಪಡಿಸಿತು.
ಐವರು ಸಹ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡುವಾಗ ಸರ್ವೋಚ್ಚ ನ್ಯಾಯಾಲಯವು,ಜಾಮೀನು ನೀಡಿಕೆಯು ಅವರ ವಿರುದ್ದದ ಆರೋಪಗಳು ದುರ್ಬಲ ಎನ್ನುವುದನ್ನು ಸೂಚಿಸುವುದಿಲ್ಲ. ಷರತ್ತುಗಳನ್ನು ಉಲ್ಲಂಘಿಸಿದರೆ ವಿಚಾರಣಾ ನ್ಯಾಯಾಲಯವು ಆರೋಪಿಗಳ ವಾದವನ್ನು ಆಲಿಸಿದ ಬಳಿಕ ಜಾಮೀನನ್ನು ರದ್ದುಗೊಳಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತದೆ ಎಂದು ಹೇಳಿತು.
2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭಗಳಲ್ಲಿ ಸಂಭವಿಸಿದ್ದ ಗಲಭೆಗಳಲ್ಲಿ ಹಲವರು ಮೃತಪಟ್ಟಿದ್ದರು. ಮನೆಗಳು,ಅಂಗಡಿಗಳು ಮತ್ತು ಆರಾಧನಾ ಸ್ಥಳಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿತ್ತು.







