I-PAC ಮೇಲೆ ದಾಳಿ | ತನಿಖೆಗೆ ಅಡ್ಡಿ, ಸಾಕ್ಷ್ಯಗಳ ನಾಶ: ಸುಪ್ರೀಂನಲ್ಲಿ ಸಿಎಂ ಬ್ಯಾನರ್ಜಿ ವಿರುದ್ಧ ED ಆರೋಪ

ಮಮತಾ ಬ್ಯಾನರ್ಜಿ | Photo Credit : PTI
ಹೊಸದಿಲ್ಲಿ, ಜ. 12: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಹಾಗೂ ಕೋಲ್ಕತ್ತಾ ಪೊಲೀಸ್ ಆಯುಕ್ತರ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
I-PAC ವಿರುದ್ಧದ ಬಹುರಾಜ್ಯ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಹಾಗೂ ನಾಶಪಡಿಸಿದ ಆರೋಪವನ್ನು ಜಾರಿ ನಿರ್ದೇಶನಾಲಯ ಇವರ ಮೇಲೆ ಹೊರಿಸಿದೆ.
ಎಫ್ಐಆರ್ ದಾಖಲಿಸುವುದು ಅಗತ್ಯ ಎಂದು ಪ್ರತಿಪಾದಿಸಿರುವ ಜಾರಿ ನಿರ್ದೇಶನಾಲಯ, ಕಾನೂನಿನ ರಕ್ಷಕರು ಗಂಭೀರ ಅಪರಾಧದ ಭಾಗವಾಗಿದ್ದಾರೆ ಎಂದು ಆರೋಪಿಸಿದೆ. ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಬೆದರಿಸಿದ್ದಾರೆ. ದೋಷಾರೋಪಣೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಒಳಗೊಂಡ ಫೈಲ್ಗಳು ಹಾಗೂ ಎಲೆಕ್ಟ್ರಾನಿಕ್ ಪುರಾವೆಗಳನ್ನು ಕಸಿದುಕೊಂಡಿದ್ದಾರೆ ಎಂದು ಅದು ಹೇಳಿದೆ.
ಘಟನೆಯ ಕುರಿತು ಸಿಬಿಐ ತನಿಖೆ ಕೋರಿ ಕಲ್ಕತ್ತಾ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ. ಆದರೆ ಮುಖ್ಯಮಂತ್ರಿ ಹಾಗೂ ಅವರ ಬೆಂಬಲಿಗರು ನ್ಯಾಯಾಲಯದಲ್ಲಿ ಗದ್ದಲ ಸೃಷ್ಟಿಸಿದರು. ಇದರಿಂದಾಗಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಬೇಕಾಯಿತು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ರಾಜಕೀಯ ಸಲಹಾ ಸಂಸ್ಥೆ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ (I-PAC)ಯ ಕೋಲ್ಕತ್ತಾದಲ್ಲಿರುವ ಕೇಂದ್ರ ಕಚೇರಿ ಹಾಗೂ ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದಲ್ಲಿ ನಡೆದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳ ಸರಕಾರ ಹಸ್ತಕ್ಷೇಪ ನಡೆಸಿ ಅಡ್ಡಿ ಉಂಟು ಮಾಡಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಶನಿವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಜಾರಿ ನಿರ್ದೇಶನಾಲಯದ ಈ ನಡೆಯ ಬಳಿಕ ರಾಜ್ಯ ಸರಕಾರ ಯಾವುದೇ ಪ್ರತಿಕೂಲ ಆದೇಶ ನೀಡುವ ಮುನ್ನ ತಮ್ಮ ಅಭಿಪ್ರಾಯ ಆಲಿಸಲು ಅವಕಾಶ ನೀಡುವಂತೆ ಕೋರಿ ಕೇವಿಯಟ್ ಸಲ್ಲಿಸಿತ್ತು.







