ಅರಾವಳಿ ಗಣಿಗಾರಿಕೆ | ಸಮಗ್ರ ಪರಿಶೀಲನೆಗೆ ಪರಿಣತ ಸಮಿತಿ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ, ಜ. 21: ಅಕ್ರಮ ಗಣಿಗಾರಿಕೆ ಪರಿಸರಕ್ಕೆ ಸರಿಪಡಿಸಲಾಗದ ಹಾನಿ ಉಂಟು ಮಾಡಬಹುದು ಎಂದು ಬುಧವಾರ ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಅರಾವಳಿ ಪರ್ವತಶ್ರೇಣಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಸಂಬಂಧಿತ ಸಮಸ್ಯೆಗಳ ಕುರಿತು ಸಮಗ್ರ ಪರಿಶೀಲನೆಗೆ ಪರಿಣತ ಸಮಿತಿಯೊಂದನ್ನು ರಚಿಸುವುದಾಗಿ ತಿಳಿಸಿದೆ.
ಪರಿಸರ ತಜ್ಞರು ಹಾಗೂ ಗಣಿಗಾರಿಕೆ ಸೇರಿದಂತೆ ಸಂಬಂಧಿತ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ವಿಜ್ಞಾನಿಗಳ ಹೆಸರುಗಳನ್ನು ನಾಲ್ಕು ವಾರಗಳೊಳಗೆ ಸೂಚಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ನ್ಯಾಯಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಮತ್ತು ನ್ಯಾಯಾಲಯದ ಸಲಹೆಗಾರ ಕೆ. ಪರಮೇಶ್ವರ್ ಅವರಿಗೆ ಸೂಚಿಸಿದೆ. ಸಮಿತಿಯು ನ್ಯಾಯಾಲಯದ ನಿರ್ದೇಶನ ಮತ್ತು ಉಸ್ತುವಾರಿಯಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಇತರ ಪರ್ವತ ಮತ್ತು ಬೆಟ್ಟಗಳೊಂದಿಗೆ ಅರಾವಳಿ ಬೆಟ್ಟಗಳು ಹಾಗೂ ಪರ್ವತಶ್ರೇಣಿಗಳನ್ನು ಹೋಲಿಸಿದ ವರದಿಯನ್ನು ಅಂಗೀಕರಿಸಿ, ನವೆಂಬರ್ 20ರಂದು ನೀಡಿದ್ದ ಆದೇಶದ ಅಮಾನತನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ.
ಅರಾವಳಿ ಪರ್ವತಶ್ರೇಣಿಯ ಹಲವು ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ವಿಚಾರಣೆಯ ವೇಳೆ ಕೋರ್ಟ್ಗೆ ತಿಳಿಸಲಾಯಿತು. ಈ ವೇಳೆ ರಾಜಸ್ಥಾನ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಹೇಳಿದರು.







