ಮೇಲ್ಜಾತಿಯ ಹಿಂದೂಗಳಿಗೆ ಅಲ್ಪಸಂಖ್ಯಾತ ಪ್ರಮಾಣಪತ್ರ ನೀಡುವುದು ‘ಹೊಸ ಮಾದರಿಯ ವಂಚನೆ’: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ, ಜ. 28: ಅಲ್ಪಸಂಖ್ಯಾತರ ಮೀಸಲಾತಿ ಸೌಲಭ್ಯಗಳನ್ನು ಪಡೆಯುವ ಏಕೈಕ ಉದ್ದೇಶದಿಂದ ಹರ್ಯಾಣದಲ್ಲಿ ಬಲಾಢ್ಯ ಮೇಲ್ಜಾತಿಗಳ ಜನರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವ ‘ನೂತನ ಮಾದರಿಯ ವಂಚನೆ’ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಅಲ್ಪಸಂಖ್ಯಾತ ಪ್ರಮಾಣಪತ್ರಗಳನ್ನು ಹೇಗೆ ನೀಡಲಾಗುತ್ತಿದೆ ಎಂಬ ಕುರಿತು ವರದಿಯೊಂದನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.
ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವು ನಿಖಿಲ್ ಕುಮಾರ್ ಪುನಿಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿತ್ತು. ತಾನು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು, ಅಲ್ಪಸಂಖ್ಯಾತ ಅಭ್ಯರ್ಥಿಯ ನೆಲೆಯಲ್ಲಿ ತನಗೆ ಉದ್ಯೋಗ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ವಿಚಾರಣೆಯ ವೇಳೆ ಮುಖ್ಯ ನ್ಯಾಯಾಧೀಶರು ಅರ್ಜಿದಾರರ ಸಾಮಾಜಿಕ ಹಿನ್ನೆಲೆಯ ಕುರಿತು ಪ್ರಶ್ನಿಸಿದರು.
“ನೀವು ಒಬ್ಬ ಪುನಿಯ? ನೀವು ಹೇಗೆ ಅಲ್ಪಸಂಖ್ಯಾತರಾಗುತ್ತೀರಿ? ನಾನಿದನ್ನು ನಿಮಗೆ ನೇರವಾಗಿ ಕೇಳುತ್ತಿದ್ದೇನೆ. ನೀವು ಯಾವ ಪುನಿಯ?” ಎಂದು ಮುಖ್ಯ ನ್ಯಾಯಾಧೀಶರು ಪ್ರಶ್ನಿಸಿದರು.
ಅರ್ಜಿದಾರರು ಜಾಟ್ ಪುನಿಯ ಸಮುದಾಯಕ್ಕೆ ಸೇರಿದವರು ಎಂದು ಅವರ ವಕೀಲರು ಉತ್ತರಿಸಿದಾಗ, ಹಾಗಾದರೆ ನೀವು ಅಲ್ಪಸಂಖ್ಯಾತ ಸ್ಥಾನಮಾನವನ್ನು ಹೇಗೆ ಕೇಳುತ್ತೀರಿ ಎಂದು ನ್ಯಾಯಪೀಠ ಪ್ರಶ್ನಿಸಿತು.
“ಅರ್ಜಿದಾರರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮತಾಂತರಗೊಳ್ಳುವುದು ಅವರ ಹಕ್ಕು,” ಎಂದು ವಕೀಲರು ಉತ್ತರಿಸಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶರು, “ಓಹ್! ಇದೊಂದು ಹೊಸ ಮಾದರಿಯ ವಂಚನೆ,” ಎಂದು ಉದ್ಗರಿಸಿದರು.
ಅಲ್ಪಸಂಖ್ಯಾತ ಪ್ರಮಾಣಪತ್ರಗಳನ್ನು ನೀಡುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹರ್ಯಾಣದ ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯ ನಿರ್ದೇಶನ ನೀಡಿತು. ಮೇಲ್ಜಾತಿಯ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಧಾರ್ಮಿಕ ಮತಾಂತರವಾಗಿದೆ ಎಂದು ಹೇಳಿಕೊಂಡು ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯಬಹುದೇ ಎಂಬುದನ್ನು ಸ್ಪಷ್ಟಪಡಿಸುವಂತೆಯೂ ನ್ಯಾಯಾಲಯ ಸೂಚಿಸಿತು.







