ದಿಲ್ಲಿ ಗಲಭೆ ಪ್ರಕರಣ | ಉಮರ್ ಖಾಲಿದ್ ಸೇರಿ ನಾಲ್ವರು ಆರೋಪಿಗಳ ಜಾಮೀನು ವಿಚಾರಣೆ ಸೆ.19ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಉಮರ್ ಖಾಲಿದ್, ಶಾರ್ಜೀಲ್ ಇಮಾಂ | PC : PTI
ಹೊಸದಿಲ್ಲಿ: 2020ರ ದಿಲ್ಲಿ ಗಲಭೆಗೆ ಪಿತೂರಿ ಪ್ರಕರಣದಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರನ್ ಹೈದರ್ ಹಾಗೂ ಗುಲ್ಫಿಶಾ ಫಾತಿಮಾ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಸೆ.19ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆ ನಿಗದಿಯಾಗಿದ್ದರೂ, ಪೂರಕ ಪಟ್ಟಿಯ ದಾಖಲೆಗಳು ತಡರಾತ್ರಿ 2.30ರ ಬಳಿಕವೇ ಬಂದ ಕಾರಣ ವಿಚಾರಣೆ ಮುಂದೂಡಬೇಕಾಯಿತು ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ತಿಳಿಸಿದ್ದಾರೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ಸಿ.ಯು. ಸಿಂಗ್ (ಉಮರ್ ಖಾಲಿದ್ ಪರವಾಗಿ), ಡಾ. ಅಭಿಷೇಕ್ ಮನು ಸಿಂಗ್ವಿ (ಗುಲ್ಫಿಶಾ ಫಾತಿಮಾ ಪರವಾಗಿ) ಹಾಗೂ ಸಿದ್ಧಾರ್ಥ್ (ಶಾರ್ಜೀಲ್ ಇಮಾಮ್ ಪರವಾಗಿ) ಹಾಜರಿದ್ದರು.
ಅರ್ಜಿದಾರರು ಸೆಪ್ಟೆಂಬರ್ 2ರಂದು ದಿಲ್ಲಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ನ ನ್ಯಾಯಮೂರ್ತಿ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ನಾಲ್ವರು ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು.
2019–20ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಪ್ರತಿಭಟನೆಗಳನ್ನು ಮುನ್ನಡೆಸಿದ್ದ ಆರೋಪಿಗಳ ವಿರುದ್ಧ, 2020ರ ಫೆಬ್ರವರಿಯಲ್ಲಿ ನಡೆದ ದಿಲ್ಲಿ ಗಲಭೆಯ ಹಿಂದಿನ ಪಿತೂರಿ ಆರೋಪದಡಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಹಾಗೂ ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.







