ಉಮೀದ್ ಪೋರ್ಟಲ್ನಲ್ಲಿ ವಿವರಗಳ ಸಲ್ಲಿಕೆ: ಸಮಯ ವಿಸ್ತರಣೆಗೆ ನ್ಯಾಯಮಂಡಳಿಗಳನ್ನು ಸಂಪರ್ಕಿಸಲು ವಕ್ಫ್ಗಳಿಗೆ ಸುಪ್ರೀಂ ಸೂಚನೆ

Photo credit: PTI
ಹೊಸದಿಲ್ಲಿ: ಉಮೀದ್ ಪೋರ್ಟಲ್ನಲ್ಲಿ ವಕ್ಫ್ ಆಸ್ತಿಗಳ ವಿವರಗಳನ್ನು ಅಪ್ಲೋಡ್ ಮಾಡಲು ಗಡುವನ್ನು ವಿಸ್ತರಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ. ಏಕೀಕೃತ ವಕ್ಫ್ ನಿರ್ವಹಣೆ,ಸಬಲೀಕರಣ,ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆಯ ಕಲಂ 3ಬಿ ಸೂಕ್ತ ಪ್ರಕರಣಗಳಲ್ಲಿ ಗಡುವು ವಿಸ್ತರಿಸಲು ವಕ್ಫ್ ನ್ಯಾಯಮಂಡಳಿಗಳಿಗೆ ಅಧಿಕಾರ ನೀಡಿದೆ ಎಂದು ಅದು ಬೆಟ್ಟು ಮಾಡಿದೆ.
ನ್ಯಾಯಮೂರ್ತಿಗಳಾದ ದೀಪಂಕರ ದತ್ತ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಅರ್ಜಿಗಳನ್ನು ವಿಲೇವಾರಿಗೊಳಿಸುವ ಮೂಲಕ ಅರ್ಜಿದಾರರು ಗಡುವಿಗೆ ಮುನ್ನ ಆಯಾ ನ್ಯಾಯಮಂಡಳಿಗಳನ್ನು ಸಂಪರ್ಕಿಸಲು ಅವಕಾಶವನ್ನು ನೀಡಿತು.
‘ವಿವರಗಳನ್ನು ಅಪ್ಲೋಡ್ ಮಾಡಲು ನೀಡಲಾಗಿರುವ ಆರು ತಿಂಗಳು ಗಡುವು ತುಂಬ ಕಡಿಮೆಯಾಗಿದೆ. ನಮಗೆ ವಿವರಗಳು ತಿಳಿದಿಲ್ಲ. 100-125 ವರ್ಷಗಳಷ್ಟು ಹಳೆಯದಾದ ವಕ್ಫ್ಗಳಿಗೆ ವಕಿಫ್ ಯಾರು ಎನ್ನುವುದು ನಮಗೆ ಗೊತ್ತಿಲ್ಲ. ಈ ವಿವರಗಳಿಲ್ಲದೆ ಪೋರ್ಟಲ್ ಸ್ವೀಕರಿಸುವುದಿಲ್ಲ’ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಪೀಠಕ್ಕೆ ತಿಳಿಸಿದರು.
ಪೋರ್ಟಲ್ನಲ್ಲಿ ಹಲವಾರು ದೋಷಗಳಿವೆ ಎಂದು ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ ಹೇಳಿದರು. ನೋಂದಣಿ ಅಗತ್ಯಗಳನ್ನು ಪಾಲಿಸಲು ಒಪ್ಪಿಕೊಂಡ ಅವರು,ಅರ್ಜಿದಾರರು ಗಡುವು ವಿಸ್ತರಣೆಯನ್ನು ಮಾತ್ರ ಕೋರಿದ್ದಾರೆ ಎಂದು ನಿವೇದಿಸಿಕೊಂಡರು.
ಕಾಯ್ದೆಯ ಕಲಂ 3ಬಿ ನಿಬಂಧನೆಗಳ ಪ್ರಕಾರ ವಕ್ಫ್ಗಳು ನ್ಯಾಯಮಂಡಳಿಗಳನ್ನು ಸಂಪರ್ಕಿಸಬಹುದು ಮತ್ತು ಆಯಾ ಪ್ರಕರಣದ ಆಧಾರದಲ್ಲಿ ಗಡುವು ವಿಸ್ತರಣೆಯನ್ನು ಕೋರಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಇದರರ್ಥ 10 ಲಕ್ಷ ಮುತ್ತವಲ್ಲಿಗಳು ಗಡುವು ವಿಸ್ತರಣೆಯನ್ನು ಕೋರಿ ನ್ಯಾಯಮಂಡಳಿಗಳ ಮುಂದೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಸಿಬಲ್ ಪ್ರತಿಕ್ರಿಯಿಸಿದರು.
ಜೂ.6ರಂದು ಪೋರ್ಟಲ್ ಕಾರ್ಯಾರಂಭಗೊಂಡಿದೆ, ಹೀಗಾಗಿ ವಿವರಗಳನ್ನು ಅಪ್ಲೋಡ್ ಮಾಡಲು ಡಿ.6 ಕೊನೆಯ ದಿನಾಂಕವಾಗಿದೆ ಎಂದು ಮೆಹ್ತಾ ಹೇಳಿದರು.
ವಕ್ಫ್ಗಳು 100-125 ವರ್ಷಗಳಷ್ಟು ಹಳೆಯದಾಗಿದ್ದು ವಿವರಗಳು ತಿಳಿದಿರದ ಪ್ರಕರಣಗಳಲ್ಲಿ ನ್ಯಾಯಮಂಡಳಿಯನ್ನು ಸಂಪರ್ಕಿಸಬಹುದು ಎಂದು ಪೀಠವು ತಿಳಿಸಿತು.
ಪೋರ್ಟಲ್ ಕಾರ್ಯ ನಿರ್ವಹಿಸುತ್ತಿದೆ ಎಂದು ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ ಮತ್ತು ಅದು ನಿಮ್ಮಿಂದ ವಿವಾದಿತವಾಗಿದೆ. ಹೀಗಿರುವಾಗ ನೀವು ಏನಾದರೂ ಸಾಕ್ಷ್ಯವನ್ನು ತೋರಿಸಬೇಕು ಎಂದು ನ್ಯಾ.ದತ್ತಾ ಹೇಳಿದರು. ಪೋರ್ಟಲ್ನಲ್ಲಿಯ ದೋಷಗಳನ್ನು ತೋರಿಸುವ ಟಿಪ್ಪಣಿಯನ್ನು ತಾನು ಸಲ್ಲಿಸುವುದಾಗಿ ಸಿಬಲ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ,ಈಗಾಗಲೇ ಹಲವಾರು ವಕ್ಫ್ಗಳು ನೋಂದಣಿಯಾಗಿವೆ ಎಂದು ವಾದಿಸಿದರು.
ನಿಜಾಮ್ ಪಾಶಾ ಮತ್ತು ಪಿ.ವಿ.ಸುರೇಂದ್ರನಾಥ ಸೇರಿದಂತೆ ವಕೀಲರ ವಾದ-ವಿವಾದಗಳನ್ನು ಆಲಿಸಿದ ಬಳಿಕ ಪೀಠವು ಗಡುವು ವಿಸ್ತರಣೆಗೆ ನಿರ್ದೇಶನಗಳನ್ನು ನೀಡಲು ನಿರಾಕರಿಸಿತು.
2025ರ ವಕ್ಫ್ (ತಿದ್ದುಪಡಿ) ಕಾಯ್ದೆಯು ಸರಕಾರದ ಉಮೀದ್ ಪೋರ್ಟಲ್ನಲ್ಲಿ ‘ವಕ್ಫ್ ಬೈ ಯೂಸರ್’ ಸೇರಿದಂತೆ ಎಲ್ಲ ವಕ್ಫ್ ಆಸ್ತಿಗಳ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ನೂತನ ಕಾಯ್ದೆಯಡಿ ಕಡ್ಡಾಯ ನೋಂದಣಿಗೆ ಗಡುವನ್ನು ವಿಸ್ತರಿಸುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಸಂಸದ ಅಸದುದ್ದೀನ್ ಉವೈಸಿ ಸೇರಿದಂತೆ ಹಲವಾರು ಕಕ್ಷಿಗಳು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.







