ಕೋವಿಡ್-19 ಲಸಿಕೆಯ ಅಡ್ಡ ಪರಿಣಾಮಗಳಿಂದ ಬಾಧಿತರಾದವರಿಗೆ ಪರಿಹಾರ ನೀಡಬೇಕು: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ

Photo Credit : barandbench
ಹೊಸದಿಲ್ಲಿ: ಕೋವಿಡ್-19 ಲಸಿಕೆಯ ಅಡ್ಡಪರಿಣಾಮಗಳಿಂದ ಬಾಧಿತರಾದವರಿಗೆ ನ್ಯಾಯಯುತವಾದ ಪರಿಹಾರವನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.
ಲೋಪರಾಹಿತ್ಯತೆಯ ಆಧಾರದಲ್ಲಿ ಈ ನೀತಿಯನ್ನು ಜಾರಿಗೆ ತರಬೇಕೆಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಆದೇಶದಲ್ಲಿ ತಿಳಿಸಿದೆ. ಈ ಕಾನೂನು ನಿಯಮದ ಪ್ರಕಾರ ಯಾರಿಂದಲೂ ಗಾಯಗಳು, ನಷ್ಟಗಳು ಅಥವಾ ಹಾನಿಗಳು ಯಾರಿಂದಲೇ ಆಗಿರಲಿ ಬಾಧಿತರಿಗೆ ಪರಿಹಾರ ದೊರೆಯಬೇಕಾಗಿದೆ ಎಂದು ವರದಿ ಹೇಳಿದೆ.
ಕೋವಿಡ್19 ನಿರೋಧಕ ಲಸಿಕೆಯ ಅಡ್ಡ ಪರಿಣಾಮಗಳಿಂದಾಗಿ ತಮ್ಮ ಪುತ್ರಿಯರು ಸಾವನ್ನಪ್ಪಿದ್ದಾರೆಂದು ಆರೋಪಿಸಿ ದಂಪತಿಯೊಂದು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ತಮ್ಮ ಪುತ್ರಿಯರು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಮಿತಿಯಿಂದ ನಡೆಸಬೇಕೆಂದು ದಂಪತಿ ಅರ್ಜಿಯಲ್ಲಿ ಕೋರಿದ್ದರು. ಮೃತರ ಶವಪರೀಕ್ಷೆ (ಅಟಾಪ್ಸಿ) ಮತ್ತು ತನಿಖೆಯ ವರದಿಗಳನ್ನು ತ್ವರಿತವಾಗಿ ಬಿಡುಗಡೆಗೊಳಿಸಬೇಕೆಂದು ಅವರು ಆಗ್ರಹಿಸಿದ್ದರು.
ತಮ್ಮ ಪುತ್ರಿಯರ ಸಾವಿಗಾಗಿ ತಮಗೆ ಸೂಕ್ತವಾದ ಆರ್ಥಿಕ ಪರಿಹಾರ ನೀಡಬೇಕೆಂದು ಪಾಲಕರು ಅರ್ಜಿಯಲ್ಲಿ ಕೋರಿದ್ದರು. ಲಸಿಕೆಗಳ ವ್ಯತಿರಿಕ್ತ ಅಡ್ಡಪರಿಣಾಮಗಳಿಂದ ಬಳಲುತ್ತಿರುವವರನ್ನು ತ್ವರಿತವಾಗಿ ಗುರುತಿಸಲು ಹಾಗೂ ಅವರಿಗೆ ಚಿಕಿತ್ಸೆ ನೀಡಲು ಮಾರ್ಗದರ್ಶಿಸೂತ್ರಗಳನ್ನು ರೂಪಿಸುವಂತೆ ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ಪ್ರಕರಣದ ಆಲಿಕೆ ನಡೆಸಿದ ನ್ಯಾಯಪೀಠವು ಕೋವಿಡ್19 ಬಾಧಿತರಿಗೆ ಪರಿಹಾರ ನೀಡುವ ಯೋಜನೆಯಿಂದಾಗಿ, ಕೇಂದ್ರ ಸರಕಾರವು ಅದರ ಬಾಧ್ಯತೆಯನ್ನು ಒಪ್ಪಿಕೊಂಡಂತಾಗುತ್ತದೆ ಎಂದು ಪರಿಗಣಿಸಬಾರದು ಎಂದು ನ್ಯಾಯಪೀಠ ಕಿವಿಮಾತು ಹೇಳಿದೆ.
ಆದಾಗ್ಯೂ, ಕೋವಿಡ್-19 ಲಸಿಕೆಗಳ ಅಡ್ಡಪರಿಣಾಮಗಳ ಪರಿಶೀಲನೆಗೆ ನೂತನ ತಜ್ಞರ ಸಮಿತಿಯನ್ನು ಸ್ಥಾಪಿಸುವ ಅಗತ್ಯವಿಲ್ಲವೆಂದು ನ್ಯಾಯಪೀಠ ತಿಳಿಸಿದೆ.







