‘ಉದಯ್ ಪುರ್ ಫೈಲ್ಸ್’ ಚಿತ್ರದ ಮೇಲಿನ ತಡೆಯನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ನಕಾರ: ತ್ವರಿತ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರಕಾರದ ಸಮಿತಿಗೆ ಸೂಚನೆ

Photo: barandbench.com
ಹೊಸದಿಲ್ಲಿ: ಉದಯ್ ಪುರ್ ನಲ್ಲಿ ನಡೆದಿದ್ದ ಟೈಲರ್ ಕನ್ಹಯ್ಯ ಲಾಲ್ ತೇಲಿಯ ಹತ್ಯೆ ಪ್ರಕರಣವನ್ನು ಆಧರಿಸಿ ನಿರ್ಮಿಸಲಾಗಿರುವ ‘ಉದಯ್ ಪುರ್ ಫೈಲ್ಸ್’ ಚಿತ್ರದ ಬಿಡುಗಡೆಗೆ ದಿಲ್ಲಿ ಹೈಕೋರ್ಟ್ ನೀಡಿರುವ ತಡೆಯನ್ನು ತೆರವುಗೊಳಿಸಲು ಬುಧವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಜಾಯ್ ಮಾಲಾ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು, ಹೈಕೋರ್ಟ್ ನೀಡಿರುವ ನಿರ್ದೇಶನದಂತೆ, ಕೇಂದ್ರ ಸರಕಾರವು ಚಲನಚಿತ್ರದ ಪರಿಶೀಲನೆಯನ್ನು ಮುಂದುವರಿಸಬಹುದಾಗಿದೆ ಎಂದು ಅನುಮತಿ ನೀಡಿದೆ.
ಚಲನಚಿತ್ರದ ಕುರಿತು ಕೇಳಿ ಬಂದಿರುವ ಆಕ್ಷೇಪಗಳು ಕುರಿತು ನಿರ್ಧರಿಸಲು ರಚಿಸಲಾಗಿರುವ ಸಮಿತಿಯು, ಈ ಕುರಿತು ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು ಎಂದೂ ನ್ಯಾಯಾಲಯ ನಿರ್ದೇಶನ ನೀಡಿದೆ.
ಚಲನಚಿತ್ರದ ತುಣುಕುಗಳ ಕುರಿತು ಹೈಕೋರ್ಟ್ ಯಾವುದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿಲ್ಲ ಎಂಬ ಸಂಗತಿಯನ್ನು ಗಮನಕ್ಕೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಸರಕಾರದಿಂದ ಪರಿಹಾರ ಪಡೆಯುವಂತೆ ಮಾತ್ರ ಅರ್ಜಿದಾರರಿಗೆ ಸೂಚಿಸಿದೆ ಎಂದು ಹೇಳಿತು.
‘ಉದಯ್ ಪುರ್ ಫೈಲ್ಸ್’ ಚಲನಚಿತ್ರ ಜುಲೈ 11ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಈ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದರಿಂದ, ದಿಲ್ಲಿ ಹೈಕೋರ್ಟ್ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ತುರ್ತು ವಿಚಾರಣಾ ಸಲ್ಲಿಕೆಯಾಗಿದ್ದರಿಂದ, ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಜುಲೈ 14ರಂದು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿತ್ತು.







