ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 17A ಕುರಿತು ಸುಪ್ರೀಂ ಕೋರ್ಟಿನ ಭಿನ್ನ ತೀರ್ಪು

Photo credit: PTI
ಹೊಸದಿಲ್ಲಿ: ಕೇಂದ್ರದ ಅನುಮತಿಯಿಲ್ಲದೆ ಸರಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳ ತನಿಖೆ ನಡೆಸುವುದನ್ನು ನಿರ್ಬಂಧಿಸಿರುವ ಭ್ರಷ್ಟಾಚಾರ ತಡೆ ಕಾಯ್ದೆಯ 17A ಕಲಮ್ನ ಸಾಂವಿಧಾನಿಕ ಸಿಂಧುತ್ವದ ಕುರಿತು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಭಿನ್ನ ತೀರ್ಪನ್ನು ಪ್ರಕಟಿಸಿದೆ.
ನ್ಯಾಯಮೂರ್ತಿಗಳಾದ ಕೆ.ವಿ.ವಿಶ್ವನಾಥನ್ ಮತ್ತು ಬಿ.ವಿ.ನಾಗರತ್ನಾ ಅವರ ಪೀಠವು ಈ ವಿಷಯದಲ್ಲಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು. ನ್ಯಾ.ವಿಶ್ವನಾಥನ್ ಅವರು ಈ ನಿಬಂಧನೆಯು ಸಂವಿಧಾನಬದ್ಧವಾಗಿದೆ ಎಂದು ಹೇಳಿದರೆ, ನ್ಯಾ.ನಾಗರತ್ನಾ ಅವರು ನಿಬಂಧನೆಯು ಸಂವಿಧಾನಬಾಹಿರವಾಗಿದೆ ಮತ್ತು ಅದನ್ನು ರದ್ದುಗೊಳಿಸಬೇಕು ಎಂದು ಅಭಿಪ್ರಾಯಿಸಿದರು.
ಕಲಂ 17A ಸಂವಿಧಾನಬಾಹಿರವಾಗಿದೆ ಮತ್ತು ಅದನ್ನು ರದ್ದುಗೊಳಿಸಬೇಕು. ಸರಕಾರಿ ಅಧಿಕಾರಿಯ ವಿರುದ್ಧ ಕಾನೂನು ಕ್ರಮಕ್ಕೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಈ ನಿಬಂಧನೆಯು ಈ ಹಿಂದೆ ವಿನೀತ್ ನಾರಾಯಣ ಮತ್ತು ಸುಬ್ರಮಣಿಯನ್ ಸ್ವಾಮಿ ತೀರ್ಪುಗಳಲ್ಲಿ ರದ್ದುಗೊಳಿಸಿದ್ದನ್ನು (ದಿಲ್ಲಿ ಸ್ಪೆಷಲ್ ಪೋಲಿಸ್ ಎಸ್ಟ್ಯಾಬ್ಲಿಷ್ಮೆಂಟ್ ಆ್ಯಕ್ಟ್ನ 6A ಕಲಮ್) ಮರುಸ್ಥಾಪಿಸುವ ಪ್ರಯತ್ನವಾಗಿದೆ. ಪೂರ್ವಾನುಮತಿಯ ಅಗತ್ಯವು ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾಗಿದ್ದು,ಅದು ತನಿಖೆಯನ್ನು ತಡೆಯುತ್ತದೆ ಮತ್ತು ಪ್ರಾಮಾಣಿಕರ ಬದಲು ಭ್ರಷ್ಟರನ್ನು ರಕ್ಷಿಸುತ್ತದೆ ಎಂದು ನ್ಯಾ.ನಾಗರತ್ನಾ ಹೇಳಿದರು.
ದೇಶದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದ್ದು, ಪ್ರಬಲ ಭ್ರಷ್ಟಾಚಾರ ವಿರೋಧಿ ಕಾನೂನಿನ ಅಗತ್ಯವಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 17A ಭ್ರಷ್ಟ ಅಧಿಕಾರಿಯನ್ನು ರಕ್ಷಿಸುತ್ತದೆ ಎಂದರು.
ಇದಕ್ಕೆ ವಿರುದ್ಧವಾಗಿ ನ್ಯಾ.ವಿಶ್ವನಾಥನ್ ಅವರು ಈ ನಿಬಂಧನೆಯು ಸಂವಿಧಾನಬದ್ಧವಾಗಿದೆ, ಆದರೆ ಸರಕಾರಿ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಬೇಕೇ ಅಥವಾ ಬೇಡವೇ ಎನ್ನುವುದನ್ನು ಲೋಕಪಾಲ ಅಥವಾ ಲೋಕಾಯುಕ್ತ ನಿರ್ಧರಿಸಬೇಕು. ಕಲಂ 17A ಅನ್ನು ರದ್ದುಗೊಳಿಸುವುದು ಸ್ನಾನದ ನೀರಿನ ಜೊತೆಗೆ ಮಗುವನ್ನೂ ಹೊರಕ್ಕೆ ಎಸೆದಂತಾಗುತ್ತದೆ ಎಂದು ಹೇಳಿದರು.
ಪ್ರಾಮಾಣಿಕ ಸರಕಾರಿ ಅಧಿಕಾರಿಗಳನ್ನು ಕ್ಷುಲ್ಲಕ ತನಿಖೆಗಳಿಂದ ರಕ್ಷಿಸದಿದ್ದರೆ ನೀತಿ ನಿಷ್ಕ್ರಿಯತೆ ಉಂಟಾಗುತ್ತದೆ ಎಂದು ಹೇಳಿದ ಅವರು,ಪ್ರಾಮಾಣಿಕ ಸರಕಾರಿ ಅಧಿಕಾರಿಗಳನ್ನು ದುರುದ್ದೇಶದ ಪ್ರಕರಣಗಳಿಂದ ರಕ್ಷಿಸುವ ಅಗತ್ಯ ಹಾಗೂ ಸರಕಾರಿ ಹುದ್ದೆಗಳಲ್ಲಿ ಪ್ರಾಮಾಣಿಕತೆಯನ್ನು ಎತ್ತಿ ಹಿಡಿಯುವ ಮಹತ್ವ;ಇವುಗಳ ನಡುವೆ ಉತ್ತಮ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಒತ್ತಿ ಹೇಳಿದರು.
17A ಕಲಮ್ನ ಉದ್ದೇಶ ಕಾನೂನುಬಾಹಿರ ಕೃತ್ಯಗಳನ್ನು ಕ್ಷಮಿಸುವುದಲ್ಲ, ಬದಲಾಗಿ ಒಂದು ತಪಾಸಣಾ ವ್ಯವಸ್ಥೆಯನ್ನು ಕಲ್ಪಿಸುವುದಾಗಿದೆ ಎಂದು ಹೇಳಿದ ನ್ಯಾ.ವಿಶ್ವನಾಥನ್, ಭಗವದ್ಗೀತೆಯ ಪ್ರಕಾರ ಸ್ವಾಭಿಮಾನವುಳ್ಳ ವ್ಯಕ್ತಿಗೆ ಅಪಖ್ಯಾತಿಗಿಂತ ಮರಣವೇ ಮೇಲು. ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ ನ್ಯಾಯಾಲಯದಲ್ಲಿ ಹಾಜರು ಪಡಿಸುವ ಕ್ರಮ ಇತ್ಯಾದಿಗಳು ನಂತರ ವ್ಯಕ್ತಿಯು ನಿರಪರಾಧಿ ಎಂದು ಸಾಬೀತಾದರೂ ಮತ್ತೆ ಸರಿಪಡಿಸಲಾಗದ ಪರಿಣಾಮಗಳನ್ನುಂಟು ಮಾಡುತ್ತವೆ ಎಂದರು.
ಭಿನ್ನ ತೀರ್ಪಿನ ಹಿನ್ನೆಲೆಯಲ್ಲಿ ಪೀಠವು ವಿಷಯವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಉಲ್ಲೇಖಿಸುವಂತೆ ಆದೇಶಿಸಿತು.
ಸೆಂಟರ್ ಫಾರ್ ಪಬ್ಲಿಕ್ ಲಿಟಿಗೇಷನ್ ಭ್ರಷ್ಟಾಚಾರ ಕಾಯ್ದೆಯ 17A ಕಲಮ್ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು.







