ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ದ್ವೇಷ ಭಾಷಣ ನಿಯಂತ್ರಿಸಿ; ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ, ಜು. 14: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ದ್ವೇಷ ಭಾಷಣವನ್ನು ನಿಯಂತ್ರಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸೂಚಿಸಿದೆ.
ಸಾಮಾಜಿಕ ಮಾಧ್ಯಮ ಪ್ರಭಾವಿ ಶರ್ಮಿಷ್ಠಾ ಪನೋಲಿ ವಿರುದ್ಧದ ಪ್ರಕರಣದಲ್ಲಿ ದೂರುದಾರರಾಗಿರುವ ವಜಾಹತ್ ಖಾನ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸಂದರ್ಭ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿತು.
ದ್ವೇಷ ಭಾಷಣವನ್ನು ‘‘ಅಭಿವ್ಯಕ್ತಿ ಸ್ವಾತಂತ್ರ್ಯ’’ ಎಂದು ಹರಡುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ನ ಪೀಠ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಆಡಳಿತ ಮಧ್ಯೆ ಪ್ರವೇಶಿಸಬೇಕು ಎಂದು ಯಾರೂ ಬಯಸುವುದಿಲ್ಲ. ಆದುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಿಸಿದೆ.
‘‘ಇಂತಹ ಭಾಷಣಗಳು ಅನುಚಿತವೆಂದು ಜನರಿಗೆ ಅರಿವಾಗುತ್ತಿಲ್ಲ ಯಾಕೆ ?’’ ಎಂದು ಪ್ರಶ್ನಿಸಿದ ಪೀಠ, ಇಂತಹ ಕೆಲವು ಭಾಷಣಗಳಿಗೆ ನಿಯಂತ್ರಣ ಇರಬೇಕು. ಜನರು ಇಂತಹ ದ್ವೇಷ ಭಾಷಣವನ್ನು ಶೇರ್ ಹಾಗೂ ಲೈಕ್ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಹೇಳಿತು.
ದ್ವೇಷ ಹಾಗೂ ಕೋಮ ಸೌಹಾರ್ದ ಕೆಡಿಸುವುದನ್ನು ಪ್ರಚೋದಿಸುವ ಅಂಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ ವಿವಿಧ ರಾಜ್ಯಗಳಲ್ಲಿ ವಜಾಹತ್ ಖಾನ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಪಶ್ಚಿಮಬಂಗಾಳದಲ್ಲಿ ದಾಖಲಾದ ಎರಡು ಎಫ್ಐಆರ್ಗೆ ಸಂಬಂಧಿಸಿ ವಜಾಹತ್ ಖಾನ್ಈಗಾಗಲೇ ಕೋಲ್ಕತಾ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗದಂತೆ ದ್ವೇಷ ಭಾಷಣವನ್ನು ನಿಯಂತ್ರಿಸಬಹುದಾದ ಮಾರ್ಗಗಳ ಬಗ್ಗೆ ಸಲಹೆ ನೀಡುವಂತೆ ಸುಪ್ರೀಂ ಕೋರ್ಟ್ ರಾಜ್ಯ, ಕೇಂದ್ರ ಹಾಗೂ ವಜಾಹತ್ ಖಾನ್ ಅವರ ಪರವಾಗಿ ಹಾಜರಿದ್ದ ವಕೀಲರಲ್ಲಿ ಕೇಳಿತು.
ಪಶ್ಚಿಮಬಂಗಾಳದ ಹೊರಗೆ ವಜಾಹತ್ ಖಾನ್ ವಿರುದ್ಧ ದಾಖಲಾದ ಎಲ್ಲಾ ಎಫ್ಐಆರ್ಗಳಲ್ಲಿ ಆತನ ಬಂಧನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ಮೂರು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ. ವಜಾಹತ್ ಖಾನ್ ಅವರಿಗೆ ಈ ಪರಿಹಾರ ನೀಡಿದ ನ್ಯಾಯಾಲಯ ಇನ್ನಷ್ಟು ಎಫ್ಐಆರ್ಗಳನ್ನು ಹಾಕಿ ವ್ಯಕ್ತಿಯನ್ನು ಜೈಲಿಗೆ ಹಾಕುವುದರಲ್ಲಿ ಏನು ಪ್ರಯೋಜನ? ಎಂದು ಪ್ರಶ್ನಿಸಿತು.







