ತಮಿಳುನಾಡು ಸೇರಿದಂತೆ ರಾಜ್ಯಗಳಲ್ಲಿ NEP ಜಾರಿ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ

Photo Credit: PTI
ಹೊಸದಿಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅದರ ತ್ರಿಭಾಷಾ ಸೂತ್ರದೊಂದಿಗೆ ಜಾರಿಗೊಳಿಸುವಂತೆ ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳ ಸರಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಇಂತಹ ನಿರ್ದೇಶನಗಳನ್ನು ರಾಜ್ಯ ಸರಕಾರಗಳಿಗೆ ನೀಡಲು ಸಾಧ್ಯವಿಲ್ಲ ಎಂದು ನ್ಯಾ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಆರ್.ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
“ಸಂವಿಧಾನದ ವಿಧಿ 32ರ ಮೂಲಕ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬಹುದಾಗಿದೆ. ಆದರೆ, ರಾಷ್ಟ್ರೀಯ ಶಿಕ್ಷಣ ನೀತಿ, 2020ರಂತಹ ನೀತಿಯನ್ನು ಅಳವಡಿಸಿಕೊಳ್ಳುವಂತೆ ಅದು ರಾಜ್ಯಗಳಿಗೆ ನೇರವಾಗಿ ಬಲವಂತಪಡಿಸಲು ಸಾಧ್ಯವಿಲ್ಲ” ಎಂದು ಶುಕ್ರವಾರ ಹೊರಡಿಸಿರುವ ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
“ಆದರೆ, ಯಾವುದೇ ರಾಜ್ಯದ ಕ್ರಿಯೆ ಅಥವಾ ನಿಷ್ಕ್ರಿಯತೆಯು ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಯಾವುದೇ ಮೂಲಭೂತ ಹಕ್ಕುಗಳು ಅಥವಾ ಇನ್ನಾವುದೇ ಇತರ ಕಾನೂನಾತ್ಮಕ ಹಕ್ಕುಗಳನ್ನು ಉಲ್ಲಂಘಿಸಿದರೆ, ಆಗ ನ್ಯಾಯಾಲಯ ಮಧ್ಯಪ್ರವೇಶಿಸಬಹುದಾಗಿದೆ. ಸಂವಿಧಾನದ ವಿಧಿ 32ರ ಅಡಿ ಸಲ್ಲಿಕೆಯಾಗಿರುವ ಈ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಈ ಕುರಿತು ಪರಿಶೀಲಿಸಲು ನಾವು ಪ್ರಸ್ತಾಪಿಸುವುದಿಲ್ಲ” ಎಂದೂ ನ್ಯಾಯಪೀಠ ಹೇಳಿದೆ.
ಅರ್ಜಿದಾರರು ತಾವು ಪ್ರಸ್ತಾಪಿಸಿರುವ ಸಂಬಂಧದ ಕಾರಣದೊಂದಿಗೆ ಮಾಡಬೇಕಾದ್ದು ಏನೂ ಇಲ್ಲ ಎಂದೂ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
“ಅರ್ಜಿದಾರರು ಮೂಲತಃ ತಮಿಳುನಾಡು ರಾಜ್ಯದವರೇ ಆಗಿದ್ದರೂ, ಅವರೇ ಒಪ್ಪಿಕೊಂಡಿರುವಂತೆ ಅವರೀಗ ಹೊಸದಿಲ್ಲಿಯಲ್ಲಿ ವಾಸಿಸುತ್ತಿದ್ದಾರೆ. ಈ ವಿಷಯವನ್ನು ಸೂಕ್ತ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಪರಿಶೀಲಿಸಬಹುದಾದರೂ, ಕನಿಷ್ಠ ಪಕ್ಷ ಈ ನಿರ್ದಿಷ್ಟ ಅರ್ಜಿಯ ವಿಚಾರದಲ್ಲಂತೂ ಅಲ್ಲ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ, 2020 ಅನ್ನು ಜಾರಿಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಜಿ.ಎಸ್.ಮಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಮೇಲಿನಂತೆ ಅಭಿಪ್ರಾಯ ಪಟ್ಟಿದೆ.







