ವಾರಾಣಸಿ | ಮಕ್ಕಳ ಕಳ್ಳಸಾಗಣೆದಾರರಿಗೆ ಜಾಮೀನು ಪ್ರಶ್ನಿಸಿದ್ದಕ್ಕೆ ಇಬ್ಬರು ಸ್ವಚ್ಛತಾ ಕಾರ್ಮಿಕರ ವಜಾ; ಮರುನೇಮಕಕ್ಕೆ ಸುಪ್ರೀಂ ಕೋರ್ಟ್ ಆದೇಶ

ಸುಪ್ರೀಂಕೋರ್ಟ್ | Photo Credit : webcast.gov.in
ಹೊಸದಿಲ್ಲಿ: ಮಕ್ಕಳ ಕಳ್ಳಸಾಗಣೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಕ್ರಮವನ್ನು ಪ್ರಶ್ನಿಸಿ ವಾರಾಣಸಿ ನಗರ ಪಾಲಿಕೆಯ ಸ್ವಚ್ಛತಾ ಕಾರ್ಮಿಕ ದಂಪತಿಗಳು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದರು ಎಂಬ ಒಂದೇ ಕಾರಣಕ್ಕೆ ಆ ದಂಪತಿಗಳನ್ನು ಕೆಲಸದಿಂದ ವಜಾಗೊಳಿಸಿದ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ಜಾಲದ ಮೂಲಕ ಕಳ್ಳಸಾಗಣೆಯಾಗಿರುವ ಮಕ್ಕಳ ಸಂಬಂಧಿಕರು ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ಅರ್ಜಿಗಳ ಗುಚ್ಛದ ವಿಚಾರಣೆಯನ್ನು ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ನಡೆಸುತ್ತಿದೆ. ಡಿಸೆಂಬರ್ 2ರಂದು ನಡೆದ ವಿಚಾರಣೆಯ ವೇಳೆ ವಾರಾಣಸಿ ನಗರ ಪಾಲಿಕೆಯ ದಶಾಶ್ವಮೇಧ್ ವಾರ್ಡ್ನಲ್ಲಿ ಗುತ್ತಿಗೆದಾರರೊಬ್ಬರ ಮೂಲಕ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಪಿಂಕಿ ಹಾಗೂ ಆಕೆಯ ಪತಿಯನ್ನು ಅಕಾರಣವಾಗಿ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಹಿರಿಯ ವಕೀಲ ಹಾಗೂ ಅಮಿಕಸ್ ಕ್ಯೂರಿ ಅಪರ್ಣಾ ಭಟ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
2023ರಲ್ಲಿ ನಮ್ಮ ಒಂದು ವರ್ಷದ ಮಗುವನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿದ್ದ ದಂಪತಿಗಳು, ಮಕ್ಕಳ ಕಳ್ಳಸಾಗಣೆ ಆರೋಪಿಗಳಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಆರೋಪಗಳು ಗಂಭೀರವಾಗಿದ್ದರೂ, ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರುವ ರಾಜ್ಯ ಸರಕಾರದ ಪ್ರಾಧಿಕಾರಗಳನ್ನು ಈ ಹಿಂದಿನ ವಿಚಾರಣೆಗಳಲ್ಲಿ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ, ಈ ವಿಷಯವನ್ನು ಸುಪ್ರೀಂಕೋರ್ಟ್ಗೆ ಕೊಂಡೊಯ್ದ ದಂಪತಿಗಳ ಕ್ರಮದಿಂದ ಅಸಮಾಧಾನಗೊಂಡಿರುವ ಅಧಿಕಾರಿಗಳು ಅವರನ್ನು ಸೇವೆಯಿಂದ ವಜಾಗೊಳಿಸಿರಬಹುದು ಎಂದೂ ನ್ಯಾಯಾಲಯ ಶಂಕೆ ವ್ಯಕ್ತಪಡಿಸಿತ್ತು.
ದಂಪತಿಗಳನ್ನು ಸೇವೆಯಿಂದ ವಜಾಗೊಳಿಸಿರುವ ಕ್ರಮದಿಂದ ನಮಗೆ ಅಸಮಾಧಾನವಾಗಿದ್ದು, ಅವರನ್ನು ಕೂಡಲೇ ಮರು ನೇಮಕ ಮಾಡಿಕೊಳ್ಳಬೇಕು ಎಂದು ಉತ್ತರ ಪ್ರದೇಶ ಸರಕಾರದ ಪರ ಹಾಜರಿದ್ದ ವಕೀಲ ಗರ್ವೇಶ್ ಕಬ್ರಾ ಅವರಿಗೆ ನ್ಯಾಯಾಲಯ ಸೂಚಿಸಿದೆ.







