ಹೈದರಾಬಾದ್ ವಿವಿ ಬಳಿ ಮರಕಡಿತ: ಮುಂದಿನ ವಿಚಾರಣೆವರೆಗೆ ಒಂದೇ ಒಂದು ಮರ ಕಡಿಯುವಂತಿಲ್ಲಎಂದ ಸುಪ್ರೀಂ ಕೋರ್ಟ್
ಮರಗಳನ್ನು ಕಡಿಯಲು ತೆಲಂಗಾಣ ಸರಕಾರದ ‘ಆತುರ’ವನ್ನು ಪ್ರಶ್ನಿಸಿದ ನ್ಯಾಯಾಲಯ

Photo Credit: PTI
ಹೊಸದಿಲ್ಲಿ: ಹೈದರಾಬಾದ್ ವಿವಿ ಸಮೀಪದ ಕಂಚ ಗಚ್ಚಿಬೌಲಿಯಲ್ಲಿಯ 100 ಎಕರೆ ಪ್ರದೇಶದಲ್ಲಿ ಅರಣ್ಯ ನಾಶದಿಂದ ಬಾಧಿತ ವನ್ಯಜೀವಿಗಳ ರಕ್ಷಣೆಗಾಗಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ತೆಲಂಗಾಣದ ವನ್ಯಜೀವಿ ವಾರ್ಡನ್ಗೆ ಆದೇಶಿಸಿದೆ. ಮುಂದಿನ ವಿಚಾರಣಾ ದಿನಾಂಕವಾದ ಮೇ 15ರವರೆಗೆ ಒಂದೇ ಒಂದು ಮರವನ್ನು ಕಡಿಯುವಂತಿಲ್ಲ ಎಂದು ಅದು ತಾಕೀತು ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ,ಮರಗಳನ್ನು ಕಡಿಯಲು ತೆಲಂಗಾಣ ಸರಕಾರದ ‘ಆತುರ’ವನ್ನು ಪ್ರಶ್ನಿಸಿದ ಸರ್ವೋಚ್ಚ ನ್ಯಾಯಾಲಯವು,ಪ್ರಾಣಿಗಳು ಆಶ್ರಯಕ್ಕಾಗಿ ಓಡುತ್ತಿರುವುದನ್ನು ತೋರಿಸಿರುವ ವೀಡಿಯೊಗಳ ಕುರಿತು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿತು. ಪರಿಸರಕ್ಕೆ ಮಾಡಲಾಗಿರುವ ಹಾನಿಯ ಬಗ್ಗೆಯೂ ಅದು ಕಳವಳವನ್ನು ವ್ಯಕ್ತಪಡಿಸಿತು.
ಪ್ರಕರಣವು ಕಂಚ ಗಚ್ಚಿಬೌಲಿಯಲ್ಲಿನ 400 ಎಕರೆ ಭೂಮಿಗೆ ಸಂಬಂಧಿಸಿದೆ. ತೆಲಂಗಾಣ ಸರಕಾರವು ಐಟಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಭೂಮಿಯನ್ನು ಹರಾಜು ಮಾಡಲು ಉದ್ದೇಶಿಸಿದೆ.
ಈ ಕ್ರಮವು ವಿದ್ಯಾರ್ಥಿಗಳು ಮತ್ತು ಪರಿಸರವಾದಿಗಳಿಂದ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.