ದಿಲ್ಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಇತರರ ಜಾಮೀನು ಅರ್ಜಿಗಳಲ್ಲಿ ನೋಟಿಸ್ ಹೊರಡಿಸಿದ ಸುಪ್ರೀಂ ಕೋರ್ಟ್

ಉಮರ್ ಖಾಲಿದ್, ಶರ್ಜೀಲ್ ಇಮಾಮ್ (Photo: PTI)
ಹೊಸದಿಲ್ಲಿ: 2020ರ ವಾಯುವ್ಯ ದಿಲ್ಲಿ ಗಲಭೆಗಳಿಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅಡಿ ವ್ಯಾಪಕ ಪಿತೂರಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಷಾ ಫಾತಿಮಾ ಮತ್ತು ಮೀರನ್ ಹೈದರ್ ಅವರು ಸಲ್ಲಿಸಿರುವ ಮೇಲ್ಮನವಿಗಳ ಕುರಿತು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನೋಟಿಸನ್ನು ಹೊರಡಿಸಿದೆ.
‘ನ್ಯಾ.ಮನಮೋಹನ್ ಅವರು ವಿಚಾರಣೆಯಿಂದ ದೂರವುಳಿದಿದ್ದರಿಂದ ಶುಕ್ರವಾರ ನಮಗೆ ಈ ವಿಷಯವನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅರವಿಂದ ಕುಮಾರ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು ಆರಂಭದಲ್ಲಿ ಹೇಳಿತು.
ಆರೋಪಿಗಳು ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ ಎಂದು ಅವರ ಪರ ವಕೀಲರು ಗಮನ ಸೆಳೆದಾಗ ನ್ಯಾಯಾಲಯವು, ‘ಹೌದು,ನಾವು ನಿಮ್ಮ ಅಹವಾಲು ಆಲಿಸುತ್ತೇವೆ ಮತ್ತು ಮೇಲ್ಮನವಿಗಳನ್ನು ಇತ್ಯರ್ಥಗೊಳಿಸುತ್ತೇವೆ. ಎಲ್ಲರಿಗೂ ನೋಟಿಸ್ ನೀಡಿ’ ಎಂದು ಹೇಳಿತು.
ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು.
‘ನಮ್ಮ ಕಕ್ಷಿದಾರರು ದೀಪಾವಳಿಗೆ ಹೊರಬರುವಂತೆ ಅದಕ್ಕೂ ಮುನ್ನ ಮೊದಲು ಅರ್ಜಿಗಳ ವಿಚಾರಣೆ ನಡೆಸಿ’ ಎಂದು ಸಿಬಲ್ ನ್ಯಾಯಾಲಯವನ್ನು ಆಗ್ರಹಿಸಿದರೆ, ಒಬ್ಬ ವಿದ್ಯಾರ್ಥಿ ಐದು ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯಬೇಕಾಗಿದ್ದು ಆಘಾತಕಾರಿಯಾಗಿದೆ ಎಂದು ಸಿಂಘ್ವಿ ಹೇಳಿದರು.
ಅ.7ರಂದು ವಿಚಾರಣೆ ನಡೆಸಲು ನ್ಯಾಯಾಲಯವು ಒಪ್ಪಿಕೊಂಡಿತು.
ತಮಗೆ ಜಾಮೀನು ನಿರಾಕರಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಸೆ.2ರ ಆದೇಶದ ವಿರುದ್ಧ ಖಾಲಿದ್ ಮತ್ತು ಇತರರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
2020ರ ಫೆಬ್ರವರಿಯಲ್ಲಿ ವಾಯುವ್ಯ ದಿಲ್ಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಗಲಭೆಗಳು ನಡೆದಿದ್ದು,53 ಜನರು ಮೃತಪಟ್ಟಿದ್ದರು ಮತ್ತು ಇತರ ನೂರಾರು ಜನರು ಗಾಯಗೊಂಡಿದ್ದರು.
ಪ್ರಸ್ತುತ ಪ್ರಕರಣವು ಆರೋಪಿಗಳು ಹಲವಾರು ಗಲಭೆಗಳನ್ನುಂಟು ಮಾಡಲು ವ್ಯಾಪಕ ಪಿತೂರಿ ನಡೆಸಿದ್ದರು ಎಂಬ ಆರೋಪಗಳಿಗೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ ದಿಲ್ಲಿ ಪೋಲಿಸರ ವಿಶೇಷ ಘಟಕವು ಐಪಿಸಿಯ ವಿವಿಧ ಕಲಮ್ಗಳು ಮತ್ತು ಯುಎಪಿಎ ಅಡಿ ಎಫ್ಐಆರ್ ದಾಖಲಿಸಿತ್ತು.
ಹೆಚ್ಚಿನ ಆರೋಪಿಗಳ ವಿರುದ್ಧ ಹಲವಾರು ಎಫ್ಐಆರ್ಗಳು ದಾಖಲಾಗಿದ್ದು, ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಹೆಚ್ಚಿನವರು 2020ರಿಂದಲೂ ಬಂಧನದಲ್ಲಿದ್ದಾರೆ.
ಖಾಲಿದ್ರನ್ನು ಸೆ.2020ರಲ್ಲಿ ಬಂಧಿಸಲಾಗಿದ್ದು, ಆಗಿನಿಂದಲೂ ಜೈಲಿನಲ್ಲಿದ್ದಾರೆ.
ಇಮಾಮ್ ವಿರುದ್ಧವೂ ವಿವಿಧ ರಾಜ್ಯಗಳಲ್ಲಿ ಹಲವಾರು ಎಫ್ಐಆರ್ಗಳು ದಾಖಲಾಗಿದ್ದು, ಹೆಚ್ಚಿನವು ದೇಶದ್ರೋಹ ಮತ್ತು ಯುಎಪಿಎ ಅಡಿ ಆರೋಪಗಳಿಗೆ ಸಂಬಂಧಿಸಿವೆ.







