ಜನನ ಪ್ರಮಾಣ ಪತ್ರ ಫೋರ್ಜರಿ ಪ್ರಕರಣ | ಲಕ್ಷ್ಯ ಸೇನ್ ಮತ್ತಿತರರ ವಿರುದ್ಧ ತನಿಖೆಗೆ ʼಸುಪ್ರೀಂʼ ತಡೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಜನನ ಪ್ರಮಾಣ ಪತ್ರವನ್ನು ಫೋರ್ಜರಿ ಮಾಡಲಾಗಿದೆ ಎಂಬ ಆರೋಪದ ಕುರಿತು ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಅವರ ಕುಟುಂಬ ಹಾಗೂ ತರಬೇತುದಾರ ವಿಮಲ್ ಕುಮಾರ್ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ತನಿಖೆಯನ್ನು ರದ್ದುಗೊಳಿಸಲು ಅಥವಾ ಅದಕ್ಕೆ ತಡೆ ನೀಡಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಕರ್ನಾಟಕ ಹೈಕೋರ್ಟ್ ನ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಅರ್ಜಿದಾರರಾದ ಚಿರಾಗ್ ಸೇನ್ ಹಾಗೂ ಮತ್ತೊಬ್ಬರ ಪರ ಹಿರಿಯ ವಕೀಲ ಸಿ.ಎ.ಸುಂದರಂ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನ್ಯಾ. ಸುಧಾಂಶು ಧುಲಿಯ ಹಾಗೂ ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠ ಸಮ್ಮತಿಸಿತು.
ನನ್ನ ಸಹೋದ್ಯೋಗಿ ಸಮಯಾವಕಾಶವನ್ನು ಕೋರಿದಾಗ ರಾಜ್ಯ ಹೈಕೋರ್ಟ್ ಜ್ಯೇಷ್ಠತೆಯ ಆಧಾರದಲ್ಲಿ ಪ್ರಕರಣವನ್ನು ವಜಾಗೊಳಿಸಿತ್ತು ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.
ಕ್ಲುಪ್ತ ವಾದದ ನಂತರ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್, ವಕೀಲೆ ರೋಹಿಣಿ ಮೂಸಾ ಮೂಲಕ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಆಧರಿಸಿ ನೋಟಿಸ್ ಜಾರಿಗೊಳಿಸಿತು.
ಇದಕ್ಕೂ ಮುನ್ನ, ಪ್ರಕರಣದ ಕುರಿತು ತನಿಖೆಗೆ ಅವಕಾಶ ನೀಡಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಮಂಗಳವಾರ ಹೈಕೋರ್ಟ್ ತನ್ನ ಆದೇಶದಲ್ಲಿ ಅಭಿಪ್ರಾಯ ಪಟ್ಟಿತ್ತು. ಅರ್ಜಿದಾರರ ವಕೀಲರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದರೂ ತಮ್ಮ ವಾದ ಮಂಡಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಅವರ ಅರ್ಜಿಗಳನ್ನು ವಜಾಗೊಳಿಸಿತ್ತು. ವಿಚಾರಣೆಗೆ ಮತ್ತಷ್ಟು ಸಮಯಾವಕಾಶ ಒದಗಿಸಲೂ ನ್ಯಾಯಾಧೀಶರು ನಿರಾಕರಿಸಿದ್ದರು.
ಖಾಸಗಿ ದೂರು ಸಲ್ಲಿಸಿದ್ದ ಎಂ.ಜಿ.ನಾಗರಾಜ್ ಎಂಬುವವರು, ಲಕ್ಷ್ಯ ಸೇನ್ ಪೋಷಕರಾದ ಧೀರೇಂದ್ರ ಹಾಗೂ ನಿರ್ಮಲಾ ಸೇನ್, ಅವರ ಸಹೋದರ ಚಿರಾಗ್ ಸೇನ್, ತರಬೇತುದಾರ ಯು.ವಿಮಲ್ ಕುಮಾರ್ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಉದ್ಯೋಗಿಯೊಬ್ಬರು ಲಕ್ಷ್ಯ ಸೇನ್ ರ ಜನನ ದಾಖಲಾತಿಗಳನ್ನು ತಿದ್ದಿದ್ದಾರೆ ಎಂದು ಆರೋಪಿಸಿದ್ದರು.
ಸೌಜನ್ಯ : deccanherald.com







