ರಸ್ತೆ ಕೆಟ್ಟ ಸ್ಥಿತಿಯಲ್ಲಿದ್ದಾಗ, ಟೋಲ್ ಹೇಗೆ ಸಂಗ್ರಹಿಸುತ್ತೀರಿ?: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಚಾಟಿಬೀಸಿದ ಸುಪ್ರೀಂ ಕೋರ್ಟ್

Photo credit: PTI
ಹೊಸದಿಲ್ಲಿ: ರಸ್ತೆಗಳು ತೀರಾ ಹದಗೆಟ್ಟಿರುವಾಗ ಯಾವ ಆಧಾರದಲ್ಲಿ ಜನರಿಂದ ಟೋಲ್ ಹಣ ವಸೂಲಿ ಮಾಡುತ್ತಿದ್ದೀರಿ ಎಂದು ಸುಪ್ರೀಂ ಕೋರ್ಟ್ ಗುರುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (NHAI) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕೇರಳದ ರಾಷ್ಟ್ರೀಯ ಹೆದ್ದಾರಿ 544 ರಲ್ಲಿನ ಪಾಲಿಯೆಕ್ಕರ ಟೋಲ್ ಪ್ಲಾಝಾದಲ್ಲಿ ಟೋಲ್ ಸಂಗ್ರಹವನ್ನು ನಿಲ್ಲಿಸಿ ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ NHAI ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತೀವ್ರ ಅಸಮ್ಮತಿ ವ್ಯಕ್ತಪಡಿಸಿದೆ.
"ರಸ್ತೆಯು ಅಷ್ಟೊಂದು ಕೆಟ್ಟ ಸ್ಥಿತಿಯಲ್ಲಿದ್ದಾಗ... ನೀವು ಜನರಿಂದ ಟೋಲ್ ತೆಗೆದುಕೊಂಡು ಸೇವೆಗಳನ್ನು ಒದಗಿಸುವುದಿಲ್ಲ..." ಎಂದು ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಎನ್ಎಚ್ಎಐಯನ್ನು ಖಾರವಾಗಿ ಪ್ರಶ್ನಿಸಿದೆ.
ಇಬ್ಬರೂ ನ್ಯಾಯಾಧೀಶರು ತಾವು ವೈಯಕ್ತಿಕವಾಗಿ ಆ ರಸ್ತೆಯಲ್ಲಿ ಪ್ರಯಾಣಿಸಿದ್ದು, ಅದರ ದುಸ್ಥಿತಿಯನ್ನು ತಮಗೆ ತಿಳಿದಿದೆ ಎಂದು ಹೇಳಿದ್ದಾರೆ.
ಎನ್ಎಚ್ಎಐ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಟೋಲ್ ಸಂಗ್ರಹದ ಗುತ್ತಿಗೆ ಪಡೆದ ಖಾಸಗಿ ಕಂಪನಿಯು ತನ್ನ ನಷ್ಟವನ್ನು ಪ್ರಾಧಿಕಾರದಿಂದ ಕೇಳಬಹುದು ಎಂದು ಆತಂಕ ವ್ಯಕ್ತಪಡಿಸಿದರು. "ಟೋಲ್ ಸಂಗ್ರಹ ಅಮಾನತಿನಿಂದ ಉಂಟಾದ ನಷ್ಟವನ್ನು ಗುತ್ತಿಗೆದಾರರು ಎನ್ಎಚ್ಎಐನಿಂದ ವಸೂಲಿ ಮಾಡಬಹುದು ಎಂದು ಹೈಕೋರ್ಟ್ ಹೇಳಿರುವುದು ನಮ್ಮ ಪ್ರಮುಖ ಆಕ್ಷೇಪವಾಗಿದೆ. ರಸ್ತೆ ನಿರ್ವಹಣೆ ಮಾಡುವುದು ಅವರ ಜವಾಬ್ದಾರಿಯಾಗಿದ್ದರೂ, ಅವರು ನಷ್ಟವನ್ನು ನಮ್ಮಿಂದ ಕೇಳುತ್ತಾರೆ ಎಂಬುದು ನನ್ನ ಚಿಂತೆ" ಎಂದು ತುಷಾರ್ ಮೆಹ್ತಾ ಹೇಳಿದರು.
ಗುತ್ತಿಗೆದಾರರಾದ 'ಗುರುವಾಯೂರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್' ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, "ಅಧಿಕಾರಿಗಳು ಗುರುತಿಸಿರುವ ಐದು ಬ್ಲೈಂಡ್ ಸ್ಪಾಟ್ಸ್ ನಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ. ನಾವು ಒಪ್ಪಂದದ ಪ್ರಕಾರ ಹೆದ್ದಾರಿಯನ್ನು ನಿರ್ವಹಿಸುತ್ತಿದ್ದೇವೆ" ಎಂದು ಹೇಳಿದರು.
ಈ ಹಂತದಲ್ಲಿ ತುಷಾರ್ ಮೆಹ್ತಾ ಅವರು, "ಇದು 65 ಕಿಲೋಮೀಟರ್ ರಸ್ತೆಯಾಗಿದ್ದು, ವಿವಾದವಿರುವುದು ಕೇವಲ 2.85 ಕಿಲೋಮೀಟರ್ ಗಳಿಗೆ ಮಾತ್ರ. ಹೆದ್ದಾರಿ ನಿರ್ಮಾಣದ ನಂತರ ಕೆಲವು ಜಂಕ್ಷನ್ ಗಳು ಬಂದಿದ್ದು, ಅಲ್ಲಿ ಅಂಡರ್ ಪಾಸ್ ಅಥವಾ ಫ್ಲೈಓವರ್ ಗಳನ್ನು ನಿರ್ಮಿಸಬೇಕಿದೆ" ಎಂದು ಪೀಠವನ್ನು ಒಲೈಸಲು ಯತ್ನಿಸಿದರು.
ಆಗ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು, "ಇದನ್ನು ನೀವು ಯೋಜನಾ ಹಂತದಲ್ಲಿಯೇ ಮಾಡಬೇಕಿತ್ತು. ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಮೊದಲೇ ನೀವು ಟೋಲ್ ಸಂಗ್ರಹಿಸಲು ಹೇಗೆ ಪ್ರಾರಂಭಿಸುತ್ತೀರಿ?" ಎಂದು ಮರುಪ್ರಶ್ನಿಸಿದರು.
ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರು, "ಎನ್ಎಚ್ಎಐ ಉಲ್ಲೇಖಿಸಿರುವ ಮುನಿಂಗೂರ್, ಅಂಬಲ್ಲೂರ್, ಪೆರಾಂಬ್ರ, ಕೊರಟ್ಟಿ ಮುಂತಾದ ಜಂಕ್ಷನ್ ಗಳು ಟೋಲ್ ಬೂತ್ ನಿಂದ ತುಂಬಾ ದೂರದಲ್ಲಿವೆ. ಟೋಲ್ ಬೂತ್ ಬಳಿಯ ಟ್ರಾಫಿಕ್ ಜಾಮ್ ನಿಂದಾಗಿ ವ್ಯಕ್ತಿಯೊಬ್ಬರು ತಮ್ಮ ಮಾವನ ಅಂತ್ಯಕ್ರಿಯೆಗೆ ಹಾಜರಾಗಲು ಸಾಧ್ಯವಾಗದ ಬಗ್ಗೆ ಮಲಯಾಳಂ ಪತ್ರಿಕೆಯಲ್ಲಿ ಬಂದ ವರದಿಯನ್ನು ನಾನು ನೋಡಿದ್ದೇನೆ. ಅಲ್ಲಿ ದೊಡ್ಡ ಅಡಚಣೆ ಇದೆ. ಆಂಬ್ಯುಲೆನ್ಸ್ ಗಳೂ ಸಹ ಹಾದುಹೋಗಲು ಸಾಧ್ಯವಾಗುವುದಿಲ್ಲ. ಮೇಲ್ಮನವಿ ಸಲ್ಲಿಸಿ ಸಮಯ ವ್ಯರ್ಥ ಮಾಡುವ ಬದಲು, ನೀವು ಏನಾದರೂ ಕ್ರಮ ಕೈಗೊಳ್ಳಿ" ಎಂದು ಸಲಹೆ ನೀಡಿದರು.
ಮೇಲ್ಮನವಿಯನ್ನು ಪರಿಗಣಿಸಲು ಪೀಠವು ಪ್ರಾಥಮಿಕವಾಗಿ ಒಲವು ತೋರಲಿಲ್ಲ. "ಎನ್ಎಚ್ಎಐ ಮತ್ತು ಗುತ್ತಿಗೆದಾರರ ನಡುವಿನ ಯಾವುದೇ ವಿವಾದವನ್ನು ಕಾನೂನಿನ ಪ್ರಕಾರ, ಮಧ್ಯಸ್ಥಿಕೆ (Arbitration) ಅಥವಾ ಇನ್ಯಾವುದೇ ರೀತಿಯಲ್ಲಿ ಪರಿಹರಿಸಿಕೊಳ್ಳಲಿ. ಇದರಿಂದ ಮಧ್ಯಸ್ಥಿಕೆದಾರರು ಮತ್ತು ವಕೀಲರಿಗೆ ಲಾಭವಾಗುತ್ತದೆ. ನಾಗರಿಕರನ್ನು ಅನಗತ್ಯವಾಗಿ ಕಷ್ಟಕ್ಕೆ ಏಕೆ ದೂಡಬೇಕು?" ಎಂದು ಸಿಜೆಐ ಗವಾಯಿ ಅಭಿಪ್ರಾಯಪಟ್ಟರು.
ಫೆಬ್ರವರಿಯಿಂದಲೂ ಈ ಸಮಸ್ಯೆಯನ್ನು ಬಗೆಹರಿಸಲು ಹೈಕೋರ್ಟ್ ಅಧಿಕಾರಿಗಳನ್ನು ಒತ್ತಾಯಿಸುತ್ತಿತ್ತು. ಆದರೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ಈ ತೀರ್ಪು ನೀಡಲಾಗಿದೆ ಎಂದು ಪೀಠವು ಬೆಟ್ಟು ಮಾಡಿತು.
ಅಂತಿಮವಾಗಿ, ಸಾಲಿಸಿಟರ್ ಜನರಲ್ ಮತ್ತು ಗುತ್ತಿಗೆದಾರರ ವಕೀಲರ ಕೋರಿಕೆಯ ಮೇರೆಗೆ, ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಆಗಸ್ಟ್ 6 ರಂದು ನೀಡಿದ ತನ್ನ ತೀರ್ಪಿನಲ್ಲಿ, ಕೇರಳ ಹೈಕೋರ್ಟ್ನ ವಿಭಾಗೀಯ ಪೀಠವು ಎಡಪಲ್ಲಿ-ಮಣ್ಣುತಿ ರಸ್ತೆಯ ಕಳಪೆ ನಿರ್ವಹಣೆ ಮತ್ತು ಕಾಮಗಾರಿ ವಿಳಂಬದಿಂದ ಉಂಟಾದ ತೀವ್ರ ಸಂಚಾರ ದಟ್ಟಣೆಯ ಕಾರಣ ನೀಡಿ, ನಾಲ್ಕು ವಾರಗಳ ಕಾಲ ಟೋಲ್ ಸಂಗ್ರಹವನ್ನು ಅಮಾನತುಗೊಳಿಸಿತ್ತು. "ಸಾರ್ವಜನಿಕರು ಹೆದ್ದಾರಿಯನ್ನು ಬಳಸಲು ಟೋಲ್ ಶುಲ್ಕವನ್ನು ಪಾವತಿಸಲು ಬದ್ಧರಾಗಿದ್ದಾರೆ. ಯಾವುದೇ ಅಡೆತಡೆಗಳಿಲ್ಲದೆ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಎನ್ಎಚ್ಎಐಯ ಜವಾಬ್ದಾರಿಯಾಗಿದೆ. ಈ ಸಾರ್ವಜನಿಕ ನಂಬಿಕೆಗೆ ಧಕ್ಕೆಯಾದಾಗ, ಶಾಸನಬದ್ಧವಾಗಿ ನೀಡಲಾದ ಟೋಲ್ ಸಂಗ್ರಹಿಸುವ ಹಕ್ಕನ್ನು ಸಾರ್ವಜನಿಕರ ಮೇಲೆ ಹೇರಲಾಗುವುದಿಲ್ಲ" ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿತ್ತು.







