ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಮಾರ್ಗಸೂಚಿಗಳನ್ನು ಹೊರಡಿಸಿದ ಸುಪ್ರೀಂ ಕೋರ್ಟ್

Photo | PTI
ಹೊಸದಿಲ್ಲಿ : ಶಾಲಾ-ಕಾಲೇಜುಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು 15 ನಿರ್ದೇಶನಗಳನ್ನು ನೀಡಿದೆ.
ಜುಲೈನಲ್ಲಿ ವಿಶಾಖಪಟ್ಟಣದ ಆಕಾಶ್ ಬೈಜು ಸಂಸ್ಥೆಯಲ್ಲಿ ನೀಟ್ ತರಬೇತಿ ಪಡೆಯುತ್ತಿದ್ದಾಗ ಹಾಸ್ಟೆಲ್ ಟೆರೇಟ್ನಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟ ವಿದ್ಯಾರ್ಥಿನಿಯ ತಂದೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶವನ್ನು ನೀಡಿದೆ.
ಖಾಸಗಿ ತರಬೇತಿ ಕೇಂದ್ರಗಳನ್ನು ನಿಯಂತ್ರಿಸಲು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಪಾಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎರಡು ತಿಂಗಳೊಳಗೆ ನಿಯಮಗಳನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಅನುಷ್ಠಾನ, ತಪಾಸಣೆ ಮತ್ತು ದೂರುಗಳನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾ ಮ್ಯಾಜಿಸ್ಟ್ರೇಟ್ಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವಂತೆಯೂ ಕೋರ್ಟ್ ಆದೇಶಿಸಿದೆ.
ಮಾರ್ಗಸೂಚಿಗಳನ್ನು ಜಾರಿಗೊಳಿಸಲು ತೆಗೆದುಕೊಂಡಿರುವ ಕ್ರಮಗಳು ಮತ್ತು ಇದರ ಮೇಲ್ವಿಚಾರಣೆಗೆ ಮಾಡಿರುವ ವ್ಯವಸ್ಥೆಗಳನ್ನು ವಿವರಿಸುವ ಅಫಿಡವಿಟ್ ಅನ್ನು 90 ದಿನಗಳ ಒಳಗೆ ಸಲ್ಲಿಸುವಂತೆ ಪೀಠವು ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.
ಈ ಬಿಕ್ಕಟ್ಟನ್ನು ಎದುರಿಸಲು, ಸುಪ್ರೀಂ ಕೋರ್ಟ್ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ‘ಉಮ್ಮೀದ್’, ಮನೋದರ್ಪಣ’ ಮತ್ತು ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಕಾರ್ಯತಂತ್ರದಂತಹ ಸರಕಾರಿ ಕಾರ್ಯಕ್ರಮದ ಆಧಾರದ ಮೇಲೆ ಏಕರೂಪದ ಮಾನಸಿಕ ಆರೋಗ್ಯ ನೀತಿಗಳನ್ನು ರೂಪಿಸಿದೆ.
100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸಂಸ್ಥೆಗಳು ಕನಿಷ್ಠ ಓರ್ವ ಅರ್ಹ ಮನಶ್ಶಾಸ್ತ್ರಜ್ಞ ಅಥವಾ ಸಲಹೆಗಾರನನ್ನು ನೇಮಿಸಿಕೊಳ್ಳಬೇಕು. ಸಹಾಯವಾಣಿ ಸಂಖ್ಯೆಗಳನ್ನು ಕ್ಯಾಂಪಸ್, ಹಾಸ್ಟೆಲ್, ವೆಬ್ಸೈಟ್ಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ಹೇಳಿದೆ.
ಹಠಾತ್ ಸ್ವಯಂ-ಹಾನಿಯನ್ನು ತಡೆಯಲು ವಸತಿ ಸಂಸ್ಥೆಗಳು ಟ್ಯಾಂಪರ್ ಪ್ರೂಫ್ ಸೀಲಿಂಗ್ ಫ್ಯಾನ್ಗಳನ್ನು ಸ್ಥಾಪಿಸಬೇಕು. ವಿದ್ಯಾರ್ಥಿಗಳಿಗೆ ಮೇಲ್ಛಾವಣಿ ಮತ್ತು ಬಾಲ್ಕನಿ ಪ್ರವೇಶವನ್ನು ನಿರ್ಬಂಧಿಸಬೇಕು. ಲೈಂಗಿಕ ದೌರ್ಜನ್ಯ, ರ್ಯಾಗಿಂಗ್ ಮತ್ತು ಜಾತಿ, ಲಿಂಗ, ಧರ್ಮ ಆಧಾರದ ಮೇಲೆ ತಾರತಮ್ಯದ ಬಗ್ಗೆ ದೂರು ನೀಡಲು ಸಂಸ್ಥೆಗಳು ಗೌಪ್ಯ ವ್ಯವಸ್ಥೆಗಳನ್ನು ಹೊಂದಿರಬೇಕು ಮತ್ತು ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಪರೀಕ್ಷೆಗೆ ಸಂಬಂಧಿಸಿದ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.







