ತಮಿಳುನಾಡು | ಆರ್ಮ್ ಸ್ಟ್ರಾಂಗ್ ಹತ್ಯೆ ಪ್ರಕರಣ ಸಿಬಿಐಗೆ ಹಸ್ತಾಂತರ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ 'ಸುಪ್ರೀಂ' ತಡೆ

Photo : PTI
ಹೊಸದಿಲ್ಲಿ: ತಮಿಳುನಾಡು ಬಿಎಸ್ಪಿಯ ಮಾಜಿ ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಹತ್ಯೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಬುಧವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಕೆ.ಆರ್ಮ್ ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ತಮಿಳುನಾಡು ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನೂ ರದ್ದುಗೊಳಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ತಮಿಳುನಾಡು ಸರಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾ. ಜೆ.ಕೆ.ಮಹೇಶ್ವರಿ ಮತ್ತು ನ್ಯಾ. ವಿಜಯ್ ಬಿಷ್ಣೋಯಿ ನೇತೃತ್ವದ ನ್ಯಾಯಪೀಠ ನಡೆಸಿತು.
ಇದಕ್ಕೂ ಮುನ್ನ, ಅಕ್ಟೋಬರ್ 10ರಂದು ತಮಿಳುನಾಡು ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಆದರೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಯಾವುದೇ ತಡೆ ನೀಡಿರಲಿಲ್ಲ.
ಬುಧವಾರ ವಿಚಾರಣೆಯ ವೇಳೆ ತಮಿಳುನಾಡು ಸರಕಾರದ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಸಿಬಿಐಗೆ ಪ್ರಕರಣದ ದಾಖಲೆಗಳನ್ನು ಹಸ್ತಾಂತರಿಸಲು ತಮಿಳುನಾಡು ಪೊಲೀಸರು ನಿರಾಕರಿಸುತ್ತಿದ್ದಾರೆ ಎಂಬ ಆರೋಪಗಳನ್ನು ಅಲ್ಲಗಳೆದರು.
ತಮಿಳುನಾಡು ಪೊಲೀಸರು ಸಮಗ್ರ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರೂ, ಮದ್ರಾಸ್ ಹೈಕೋರ್ಟ್ ಅದನ್ನು ದೇಶಾವರಿಯಾಗಿ ವಜಾಗೊಳಿಸಿದೆ ಎಂದು ಲೂತ್ರಾ ನ್ಯಾಯಾಲಯದೆದುರು ವಾದ ಮಂಡಿಸಿದ ಬಳಿಕ, ಮದ್ರಾಸ್ ಹೈಕೋರ್ಟ್ ನ ಸಿಬಿಐ ತನಿಖೆಯ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತು.







