ರೇಬೀಸ್ ಸೋಂಕಿತ ನಾಯಿಗಳನ್ನು ಹೊರತುಪಡಿಸಿ ಇನ್ನುಳಿದ ಬೀದಿ ನಾಯಿಗಳನ್ನು ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು : ಸುಪ್ರೀಂ ಕೋರ್ಟ್

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ : ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಆಗಸ್ಟ್ 8ರಂದು ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಮಾರ್ಪಾಡಿಸಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ, ಲಸಿಕೆ ನಂತರ ನಾಯಿಗಳನ್ನು ಅದೇ ಪ್ರದೇಶಕ್ಕೆ ಬಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಈ ತೀರ್ಪು ಪ್ರಾಣಿ ಪ್ರಿಯರಿಗೆ ಸಮಾಧಾನವನ್ನು ತಂದಿದೆ. ಆದರೆ, ರೇಬೀಸ್ ಅಥವಾ ಆಕ್ರಮಣಕಾರಿ ನಡವಳಿಕೆಯನ್ನು ಹೊಂದಿರುವ ನಾಯಿಗಳಿಗೆ ಲಸಿಕೆ ಹಾಕಿ ಪ್ರತ್ಯೇಕ ಆಶ್ರಯಗಳಲ್ಲಿ ಇರಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
"ದಿಲ್ಲಿಯ ಎಲ್ಲಾ ಪ್ರದೇಶಗಳನ್ನು ಬೀದಿನಾಯಿ ಮುಕ್ತಗೊಳಿಸಬೇಕೆಂಬ ಇತ್ತೀಚಿನ ಆದೇಶಕ್ಕೆ ತಡೆಹಿಡಿಯಲಾಗಿದೆ. ಅವುಗಳಿಗೆ ಜಂತುಹುಳು ನಿವಾರಣಾ ಲಸಿಕೆ ಹಾಕಿ ಅದೇ ಪ್ರದೇಶಕ್ಕೆ ವಾಪಾಸ್ಸು ಬಿಡಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕರಣವನ್ನು ವಿವರವಾಗಿ ಆಲಿಸಿದ ನಂತರ ಈ ಕುರಿತು ರಾಷ್ಟ್ರೀಯ ನೀತಿಯನ್ನು ರೂಪಿಸುವುದಾಗಿ ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠವು ಆಗಸ್ಟ್ 8ರ ಆದೇಶಕ್ಕೆ ಹಲವಾರು ಮಾರ್ಪಾಡುಗಳನ್ನು ಸೂಚಿಸಿದೆ.
ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದನ್ನು ಅನುಮತಿಸಲಾಗುವುದಿಲ್ಲ ಮತ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಕಟ್ಟುನಿಟ್ಟಾಗಿ ಹೇಳಿದೆ.





