ಅಪರಾಧ ಸಾಬೀತಾದರೂ ಮನೆ ಕೆಡವುವಂತಿಲ್ಲ: ʼಬುಲ್ಡೋಜರ್ ನ್ಯಾಯʼಕ್ಕೆ ಸುಪ್ರೀಂ ಕೋರ್ಟ್ ಲಗಾಮು

ಹೊಸದಿಲ್ಲಿ : ಅಪರಾಧ ಸಾಬೀತಾದರೂ ಬುಲ್ಡೋಝರ್ ಬಳಸಿ ಮನೆ ಕೆಡವುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಬುಲ್ಡೋಜರ್ ಕ್ರಮವನ್ನು ಪ್ರಶ್ನಿಸಿ ಮುಸ್ಲಿಂ ವಿದ್ವಾಂಸರ ಸಂಸ್ಥೆ ಜಮೀಯತ್ ಉಲಮಾ-ಎ-ಹಿಂದ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಗವಾಯಿ ಅವರು "ಆರೋಪಿ ಎಂಬ ಕಾರಣಕ್ಕೆ ಹೇಗೆ ಕೆಡವುತ್ತೀರಿ? ಅಪರಾಧಿಯಾಗಿದ್ದರೂ ಮನೆ ಕೆಡವಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಗೆ ಈ ಬಗ್ಗೆ ಸೂಚಿಸಿದ್ದರೂ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ" ಎಂದು ಅರ್ಜಿಯ ವಿಚಾರಣೆ ವೇಳೆ ಟೀಕಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ದೇಶದಾದ್ಯಂತ ‘ಬುಲ್ಡೋಝರ್ ನ್ಯಾಯ’ ನಡೆಯದಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಕೋರಿದರು.
ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆರೋಪಿ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಸ್ಥಿರ ಆಸ್ತಿಯನ್ನು ನೆಲಸಮ ಮಾಡಲಾಗುವುದಿಲ್ಲ. ಕಟ್ಟಡವು ಕಾನೂನು ಬಾಹಿರವಾಗಿದ್ದರೆ ಮಾತ್ರ ನೆಲಸಮ ಮಾಡಲಾಗುತ್ತದೆ ಎಂದು ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರ ಪೀಠಕ್ಕೆ ತಿಳಿಸಿದರು.







