ಎಲ್ಲ ಶಾಲೆಗಳಲ್ಲಿ ಬಡಮಕ್ಕಳಿಗೆ ಶೇಕಡ 25ರಷ್ಟು ಸೀಟು ಖಾತರಿ: ಸುಪ್ರೀಂ ಕ್ರಮ

photo: PTI
ಹೊಸದಿಲ್ಲಿ: ರಿಕ್ಷಾ ಚಾಲಕನ ಮಗನೊಬ್ಬ ಕೋಟ್ಯಧಿಪತಿ ಅಥವಾ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮಕ್ಕಳ ಜತೆಜತೆಗೆ ಓದುವುದು ಸಾಧ್ಯವಾದಾಗ ಮಾತ್ರ ಭ್ರಾತೃತ್ವ ಸಾಧಿಸಲು ಸಾಧ್ಯ ಎಂಬ ಸಂವಿಧಾನದ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಸುಪ್ರೀಂಕೋರ್ಟ್, ಶಿಕ್ಷಣ ಹಕ್ಕಿನ ಕಾಯ್ದೆ ಕಡ್ಡಾಯಪಡಿಸಿರುವಂತೆ ಎಲ್ಲ ಶಾಲೆಗಳಲ್ಲಿ ಶೇಕಡ 25ರಷ್ಟು ಸೀಟುಗಳನ್ನು ಬಡ ಹಾಗೂ ದುರ್ಬಲ ವರ್ಗದಮಕ್ಕಳಿಗೆ ಹಂಚಿಕೆ ಮಾಡುವುದನ್ನು ಖಾತರಿಪಡಿಸಲು ಕ್ರಮ ಕೈಗೊಂಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಎ.ಎಸ್.ಚಂದೂರ್ಕರ್ ಅವರನ್ನೊಳಗೊಂಡ ನ್ಯಾಯಪೀಠ, ಜಾತಿ, ವರ್ಗ, ಲಿಂಗ ಅಥವಾ ಆರ್ಥಿಕ ಸ್ಥಿತಿಗತಿಯ ಬೇಧವಿಲ್ಲದೇ ಎಲ್ಲ ಮಕ್ಕಳಿಗೆ ಸಮಾನ ಸಾಂಸ್ಥಿಕ ಸ್ಥಳಾವಕಾಶ ಲಭ್ಯವಾಗಬೇಕು ಎನ್ನುವ ಅಂಶವನ್ನು ಆರ್ ಟಿಇ ಕಾಯ್ದೆ ಒಳಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದೆ.
ಈ ಸಂಬಂಧ ನೀಡಿರುವ ತೀರ್ಪಿನಲ್ಲಿ ನ್ಯಾಯಮೂರ್ತಿ ನರಸಿಂಹ ಅವರು, "ಇದರಿಂದಾಗಿ ಬಹುಕೋಟ್ಯಧಿಪತಿ ಅಥವಾ ಭಾರತದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಮಗ ಕೂಡಾ ರಿಕ್ಷಾ ಚಾಲಕ ಅಥವಾ ಬೀದಿ ಬದಿ ವ್ಯಾಪಾರಿಯ ಮಗನ ಜತೆಗೆ ಒಂದೇ ತರಗತಿಯಲ್ಲಿ, ಒಂದೇ ಬೆಂಚ್ ನಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುವುದು ಸಾಧ್ಯವಾಗುತ್ತದೆ. ಇದು ಕಾಯ್ದೆಯ ಸೆಕ್ಷನ್ 12 ಅನ್ವಯ ಸಂವಿಧಾನಾತ್ಮಕ ಮೌಲ್ಯವಾದ ಭ್ರಾತೃತ್ವ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವ ಒಂದು ವಿಧಾನ" ಎಂದು ವಿಶ್ಲೇಷಿಸಿದ್ದಾರೆ.







