ಜಾತಿ ತಾರತಮ್ಯವನ್ನು ವ್ಯಾಖ್ಯಾನಿಸಿರುವ ಯುಜಿಸಿ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

Photo credit: PTI
ಹೊಸದಿಲ್ಲಿ: ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧಿಸೂಚಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ. ನಿಯಮಗಳು ಅಸ್ಪಷ್ಟವಾಗಿದ್ದು, ದುರುಪಯೋಗಕ್ಕೆ ಅವಕಾಶ ಕಲ್ಪಿಸುವಂತಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
‘ಸಾಮಾನ್ಯ ವರ್ಗಗಳ’ ವಿರುದ್ಧ ತಾರತಮ್ಯ ಉಂಟಾಗುವ ಸಾಧ್ಯತೆ ಇದೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿತು.
ನಿಯಮಾವಳಿಯನ್ನು ಪ್ರಖ್ಯಾತ ನ್ಯಾಯಶಾಸ್ತ್ರಜ್ಞರನ್ನು ಒಳಗೊಂಡ ಸಮಿತಿಯ ಮೂಲಕ ಮರುಪರಿಶೀಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ವಿಚಾರಣೆಯ ಸಂದರ್ಭದಲ್ಲಿ, ನಿಯಮಗಳು ಸ್ಪಷ್ಟತೆ ಕೊರತೆಯಿಂದ ದುರುದ್ದೇಶಪೂರಿತ ಬಳಕೆಗೆ ದಾರಿ ಮಾಡಿಕೊಡುವ ಅಪಾಯವಿದೆ ಎಂದು ಪೀಠ ಉಲ್ಲೇಖಿಸಿದೆ.
ಈ ಸಂಬಂಧ ಮೃತ್ಯುಂಜಯ್ ತಿವಾರಿ, ವಕೀಲ ವಿನೀತ್ ಜಿಂದಾಲ್ ಮತ್ತು ರಾಹುಲ್ ದಿವಾನ್ ಸಲ್ಲಿಸಿದ್ದ ಮೂರು ರಿಟ್ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಅರ್ಜಿಗಳ ಕುರಿತು ಕೇಂದ್ರ ಸರ್ಕಾರ ಮತ್ತು ಯುಜಿಸಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಮಾರ್ಚ್ 19ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಅಂತಿಮ ವಿಚಾರಣೆ ನಡೆಯುವವರೆಗೆ ಯುಜಿಸಿ ಇಕ್ವಿಟಿ ನಿಯಮಗಳು–2026 ಜಾರಿಗೆ ತಡೆ ವಿಧಿಸಲಾಗಿದ್ದು, ಈ ಅವಧಿಯಲ್ಲಿ 2012ರ ಯುಜಿಸಿ ನಿಯಮಗಳು ಜಾರಿಯಲ್ಲಿರುತ್ತವೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.







