ಮಣಿಪುರ ಹಿಂಸಾಚಾರ ತನಿಖೆಗೆ ತ್ರಿಸದಸ್ಯರ ಸಮಿತಿ ಪ್ರಸ್ತಾಪಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಮಣಿಪುರ ಹಿಂಸಾಚಾರದ ಪ್ರಕರಣದ ತನಿಖೆ ಸಹಿತ ಸಂತ್ರಸ್ತರ ಪುನರ್ವಸತಿ ಮತ್ತಿತರ ವಿಚಾರಗಳ ಬಗ್ಗೆ ಪರಿಶೀಲಿಸಲು ಹೈಕೋರ್ಟಿನ ಮೂವರು ಮಾಜಿ ನ್ಯಾಯಾಧೀಶರುಗಳನ್ನೊಳಗೊಂಡ ಸಮಿತಿಯನ್ನು ಸುಪ್ರೀಂ ಕೋರ್ಟ್ ಇಂದು ಪ್ರಸ್ತಾಪಿಸಿದೆ.
“ಕಾನೂನಿನ ಮೇಲೆ ಜನರ ವಿಶ್ವಾಸ ಮರುಸ್ಥಾಪಿಸುವ ಉದ್ದೇಶ ನಮ್ಮದಾಗಿದೆ. ಮೂವರು ಮಾಜಿ ಹೈಕೋರ್ಟ್ ನ್ಯಾಯಾಧೀಶರ ಸಮಿತಿ ರಚಿಸುತ್ತೇವೆ. ತನಿಖೆ ಹೊರತಾಗಿ ಪರಿಹಾರ, ಪರಿಹಾರೋಪಾಯಗಳ ಕುರಿತು ಅದು ಪರಿಶೀಲಿಸಲಿದೆ,” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಸಮಿತಿಯಲ್ಲಿ ಜಮ್ಮು ಕಾಶ್ಮೀರ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್, ಬಾಂಬೆ ಹೈಕೋರ್ಟಿನ ಮಾಜಿ ನ್ಯಾಯಾಧೀಶೆ ಶಾಲಿನಿ ಜೋಷಿ ಮತ್ತು ದಿಲ್ಲಿ ಹೈಕೋರ್ಟಿನ ಮಾಜಿ ನ್ಯಾಯಾಧೀಶೆ ಆಶಾ ಮೆನನ್ ಇರಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಾಜಿ ಐಪಿಎಸ್ ಅಧಿಕಾರಿ ದತ್ತಾತ್ರೇಯ ಪಡ್ಸಲ್ಗಿಕರ್ ಅವರು ಸಿಬಿಐ ತನಿಖೆಯ ಮೇಲುಸ್ತುವಾರಿ ನಡೆಸಲಿದ್ದಾರೆ ಹಾಗೂ ಕನಿಷ್ಠ ಡಿವೈಎಸ್ಪಿ ಶ್ರೇಣಿಯ ಐದು ಅಧಿಕಾರಿಗಳನ್ನು ವಿವಿಧ ರಾಜ್ಯಗಳಿಂದ ಸಿಬಿಐಗೆ ತರಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಸಿಬಿಐಗೆ ವರ್ಗಾಯಿಸದ ಪ್ರಕರಣಗಳನ್ನು ತನಿಖೆ ನಡೆಸಲು 42 ವಿಶೇಷ ತನಿಖಾ ತಂಡಗಳಿರಲಿವೆ. ಹಾಗೂ ಈ SIT ಗಳನ್ನು ಮಣಿಪುರದ ಹೊರಗಿನ ಡಿಐಜಿ ಶ್ರೇಣಿಯ ಅಧಿಕಾರಿಗಳು ಮೇಲುಸ್ತುವಾರಿ ನಡೆಸಲಿದ್ದಾರೆ. ಪ್ರತಿ ಅಧಿಕಾರಿ ಆರು SITಗಳ ಉಸ್ತುವಾರಿ ವಹಿಸಿ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆಯೇ ಎಂದು ನೋಡಲಿದ್ದಾರೆ,” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದಕ್ಕೂ ಮುಂಚೆ ಸರ್ಕಾರದ ಪರ ವಕೀಲರು ಮಾತನಾಡಿ ಪ್ರಕರಣಗಳ ತನಿಖೆ ನಡೆಸಲು ಜಿಲ್ಲಾವಾರು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗುವುದು ಎಂದರು. ಮಣಿಪುರ ಹಿಂಸಾಚಾರ ಕುರಿತಂತೆ ಕೋರ್ಟ್ ಉಸ್ತುವಾರಿಯ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಮೇಳಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ಮಣಿಪುರ ಹಿಂಸಾಚಾರ ಕುರಿತಂತೆ ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸಲು ಇಂದು ಕೋರ್ಟ್ ನಿರ್ದೇಶನದಂತೆ ಮಣಿಪುರ ಡಿಐಜಿ ರಾಜೀವ್ ಸಿಂಗ್ ಹಾಜರಿದ್ದರು.
ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಇದಕ್ಕೂ ಮುನ್ನ ಆಗಸ್ಟ್ 1ರಂದು ನಡೆದ ವಿಚಾರಣೆಯಲ್ಲಿ ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಪರಿಹಾರ, ಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ, ಪುನರ್ವಸತಿ ಮತ್ತಿತರ ಕೋರಿಕೆಗಳೊಂದಿಗೆ ಸಲ್ಲಿಸಲಾಗಿದ್ದ ಮಣಿಪುರ ಕುರಿತಾದ ಸುಮಾರು 10 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಂಡಿತ್ತು.







