ನ್ಯಾಯಮಂಡಳಿ ಸುಧಾರಣಾ ಕಾಯ್ದೆಯ ನಿಬಂಧನೆಗಳನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್; ಆಯೋಗ ಸ್ಥಾಪಿಸುವಂತೆ ಕೇಂದ್ರಕ್ಕೆ ಸೂಚನೆ

Photo Credit: ANI
ಹೊಸದಿಲ್ಲಿ, ನ.19: ವಿವಿಧ ನ್ಯಾಯಮಂಡಳಿಗಳ ಸದಸ್ಯರ ನೇಮಕಾತಿ, ಅಧಿಕಾರಾವಧಿ ಹಾಗೂ ಸೇವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ 2021ರ ನ್ಯಾಯಮಂಡಳಿಗಳ ಸುಧಾರಣೆಗಳ ಕಾನೂನಿನ ವಿವಿಧ ನಿಬಂಧನೆಗಳನ್ನು ಸುಪ್ರೀಂಕೋರ್ಚ್ ಬುಧವಾರ ರದ್ದುಪಡಿಸಿದೆ.
ಈ ಹಿಂದೆ ತಾನು ರದ್ದುಪಡಿಸಿದ್ದ ನಿಬಂಧನೆಗಳನ್ನೇ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಮತ್ತೆ ಜಾರಿಗೊಳಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿದೆ.
ಸಂವಿಧಾನದ ತತ್ವಗಳಾದ ಅಧಿಕಾರದ ಪ್ರತ್ಯೇಕತೆ ಹಾಗೂ ನ್ಯಾಯಾಂಗ ಸ್ವಾತಂತ್ರ್ಯವನ್ನು ಈ ನಿಬಂಧನೆಗಳು ಉಲ್ಲಂಘಿಸುತ್ತವೆ. ಆದುದರಿಂದ ಈ ನಿಬಂಧನೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂದು ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿತು.
ಇದೇ ವಿಚಾರವಾಗಿ ಈ ಹಿಂದೆ ನ್ಯಾಯಾಲಯವು ಅನೇಕ ಸಲ ನೀಡಿರುವ ತೀರ್ಪುಗಳನ್ನು ಕೇಂದ್ರ ಸರಕಾರವು ಪದೇ ಪದೇ ಉಲ್ಲಂಘಿಸಿರುವುದಾಗಿಯೂ ಸರ್ವೋಚ್ಚ ನ್ಯಾಯಾಯಲಯ ಅಸಮಾಧಾನ ವ್ಯಕ್ತಪಡಿಸಿತು.
ನ್ಯಾಯಾಲಯವು ಈ ಹಿಂದೆ ರದ್ದುಪಡಿಸಿ ನಿಬಂಧನೆಗಳನ್ನು ಮರುಜಾರಿಗೊಳಿಸುವ ಮೂಲಕ ಸಂಸತ್, ನ್ಯಾಯಾಂಗದ ತೀರ್ಪುಗಳ ಮೇಲೆ ಶಾಸನಾತ್ಮಕವಾಗಿ ಸವಾರಿ ಮಾಡಲು ಹೊರಟಿದೆಯೆಂದು ನ್ಯಾಯಪೀಠ ಛೀಮಾರಿ ಹಾಕಿದೆ.
ಇದಲ್ಲದೆ ನ್ಯಾಯಮಂಡಳಿಗಳ ನೇಮಕಾತಿ, ಆಡಳಿತ, ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆಯನ್ನು ಖಾತರಿಪಡಿಸಿಕೊಳ್ಳಲು ನಾಲ್ಕು ತಿಂಗಳೊಳಗೆ ರಾಷ್ಟ್ರೀಯ ನ್ಯಾಯಮಂಡಳಿ ಆಯೋಗವನ್ನು ರಚಿಸುವಂತೆಯೂ ಸುಪ್ರೀಂಕೋರ್ಟ್ ನಿರ್ದೇಶನವನ್ನು ನೀಡಿದೆ.
ನ್ಯಾಯಮಂಡಳಿಗೆ ನೇಮಕಾತಿ, ಸದಸ್ಯರ ಅವಧಿ, ವೇತನ ಸೇರಿದಂತೆ ಇತ್ಯಾದಿ ವ್ಯವಸ್ಥೆಗಳನ್ನು ಕೇಂದ್ರ ಸರಕಾರದ ವ್ಯಾಪ್ತಿಗೆ ತರುವ ಉದ್ದೇಶವನ್ನು 2021ರಂದು ನ್ಯಾಯಮಂಡಳಿ ಕಾಯ್ದೆಯು ಹೊಂದಿತ್ತು. ಆದರೆ ಈ ಕಾಯಿದೆಯು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಸಿಯುತ್ತದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಮದ್ರಾಸ್ ಬಾರ್ ಆಸೋಸಿಯೇಶನ್ ಹಾಗೂ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ಅರ್ಜಿಯ ಆಲಿಕೆಯನ್ನು ನಡೆಸಿದೆ.
ಈ ಕಾಯ್ದೆಯು ಸಂಸತ್ ನ ಶಾಸನಾತ್ಮಕ ಅಧಿಕಾರದ ಮೇಲೆ ಸಂವಿಧಾನ ವಿಧಿಸಿರುವ ಇತಿಮಿತಿಗಳನ್ನು ಉಲ್ಲಂಘಿಸಿದೆ ಹಾಗೂ ನಾಯಾಂಗಕ್ಕೆ ಇರುವ ಪರಾಮರ್ಶೆಯ ಅಧಿಕಾರವನ್ನು ಮತ್ತು ಸಂವಿಧಾನದ ಶ್ರೇಷ್ಠತೆಯನ್ನು ದುರ್ಬಲಗೊಳಿಸಿದೆಯೆಂಬ ರಮೇಶ್ ಅವರ ವಾದಕ್ಕೆ ಸುಪ್ರೀಂಕೋರ್ಟ್ ಸಹಮತ ವ್ಯಕ್ತಪಡಿಸಿದೆ.
ಅರ್ಜಿದಾರರ ಪರವಾಗಿ ಅರವಿಂದ ದಾತಾರ್ ಹಾಗೂ ಪಿ.ಎಸ್.ವೈದ್ಯನಾಥನ್ ಮತ್ತಿತರರು ವಾದ ಮಂಡಿಸಿದ್ದರು. ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಹಾಗೂ ಐಶ್ವರ್ಯಾ ಭಾಟಿ ಕೇಂದ್ರ ಪರ ವಾದಿಸಿದ್ದರು.
2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆಯು, 9 ಮಹತ್ವದ ನ್ಯಾಯಮಂಡಳಿಗಳನ್ನು ರದ್ದುಪಡಿಸಿದೆ. ಅಲ್ಲದೆ ಇತರ ಕೆಲವು ಪ್ರಮುಖ ನ್ಯಾಯಮಂಡಳಿಗಳ ಸದಸ್ಯರ ನೇಮಕಾತಿ, ಸೇವಾ ವ್ಯವಸ್ಥೆ , ವೇತನ ಇತ್ಯಾದಿ ವಿಷಯಗಳಲ್ಲಿ ಕೇಂದ್ರ ಸರಕಾರಕ್ಕೆ ವ್ಯಾಪಕ ಅಧಿಕಾರಗಳನ್ನು ನೀಡಿದೆ. 2021ರ ನ್ಯಾಯಮಂಡಳಿಗಳ ಕಾಯ್ದೆಯನ್ನು ಸಂಸತ್ನಲ್ಲಿ ಗದ್ದಲದ ನಡುವೆ ಚರ್ಚೆಯಿಲ್ಲದೆ ಅಂಗೀಕರಿಸಲಾಗಿತ್ತು ಎಂದು ಅರ್ಜಿದಾರರು ವಾದಿಸಿದ್ದರು.







