ಬಿಹಾರ ಕರಡು ಮತದಾರರ ಪಟ್ಟಿ ಬಿಡುಗಡೆಗೆ ತಡೆಯಿಲ್ಲ: ಸುಪ್ರೀಂ ಕೋರ್ಟ್
ಎಸ್ಐಆರ್ಗೆ ಆಧಾರ್, ಗುರುತಿನ ಚೀಟಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚನೆ

Photo credit: PTI
ಹೊಸದಿಲ್ಲಿ: ಬಿಹಾರದಲ್ಲಿ ಆಗಸ್ಟ್ 1 ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯನ್ನು ತಡೆಯುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಅರ್ಜಿದಾರರ ತಾತ್ಕಾಲಿಕ ತಡೆಯಾಜ್ಞೆ ವಿಚಾರಣೆಗೆ ಪರಿಗಣಿಸಲಿಲ್ಲ. ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮಧ್ಯಾಹ್ನ ಮುಖ್ಯ ನ್ಯಾಯಮೂರ್ತಿ ಗಳ ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸಬೇಕಿದ್ದ ಕಾರಣ ವಿಚಾರಣೆ ಮುಂದೂಡಲಾಯಿತು. ವಾದಕ್ಕೆ ಅಗತ್ಯವಿರುವ ಸಮಯವನ್ನು ನಾಳೆ ಸಲ್ಲಿಸುವಂತೆ ಅವರ ವಕೀಲರನ್ನು ಕೇಳಿಕೊಂಡರು.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಈ ಕರಡು ಪಟ್ಟಿ ಸುಮಾರು 4.5 ಕೋಟಿ ಮತದಾರರಿಗೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಇದನ್ನು ನಿಲ್ಲಿಸುವಂತೆ ಪೀಠವನ್ನು ಕೇಳಿಕೊಂಡರು.
“ಕರಡು ಪಟ್ಟಿ ಪ್ರಕಟವಾದ ನಂತರ ಹೆಸರು ವಂಚಿತರಾದವರು ಗಮನಿಸಿ ಆಕ್ಷೇಪಣೆ ಸಲ್ಲಿಸಲು ವಿಶೇಷ ಪ್ರಕ್ರಿಯೆಗೆ ಒಳಗಾಗಬೇಕು” ಎಂದು ವಕೀಲರು ನ್ಯಾಯಾಲಯದ ಗಮನ ಸೆಳೆದರು.
ಆಯೋಗದ ಪರವಾಗಿ ಹಿರಿಯ ವಕೀಲ ರಾಕೇಶ್ ದ್ವಿವೇದಿ, “ಇದು ಕೇವಲ ಕರಡು ಪಟ್ಟಿ. ಇದರಿಂದ ಯಾರಿಗೂ ತಕ್ಷಣದ ಹಾನಿಯಾಗದು. ಅಂತಿಮ ಪಟ್ಟಿ ಪ್ರಕಟಣೆಯ ವೇಳೆಗೆ ತಿದ್ದುಪಡಿ ಸಾಧ್ಯವಿದೆ,” ಎಂದು ಸ್ಪಷ್ಟಪಡಿಸಿದರು.
ಪೀಠದ ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಕಾಂತ್ ಅವರು, “ಇದು ಅಂತಿಮ ಕ್ರಮವಲ್ಲ. ಯಾವುದೇ ಅಕ್ರಮ, ಕೊರತೆ ಕಂಡುಬಂದಲ್ಲಿ, ಸುಪ್ರೀಂ ಕೋರ್ಟ್ ಅಂತಿಮವಾಗಿ ಪ್ರಕ್ರಿಯೆಯನ್ನೇ ರದ್ದುಗೊಳಿಸಬಹುದು,” ಎಂದು ಸ್ಪಷ್ಟಪಡಿಸಿದರು. ಶಂಕರನಾರಾಯಣನ್ ಅವರ ಮನವಿಗೆ ಪ್ರತಿಕ್ರಿಯಿಸಿ, “ನ್ಯಾಯಾಲಯವು ಪ್ರಸ್ತುತ ಹಂತದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವ ಅಗತ್ಯವಿಲ್ಲ,” ಎಂದು ಅವರು ಹೇಳಿದರು.
ವಿಚಾರಣೆಗೆ ಅಗತ್ಯವಿರುವ ತಾತ್ಕಾಲಿಕ ಸಮಯವನ್ನು ನಾಳೆ ವಾದದ ಸಮಯದಲ್ಲಿ ಸಲ್ಲಿಸುವಂತೆ ನ್ಯಾಯಾಲಯ ವಕೀಲರಿಗೆ ಸೂಚಿಸಿದೆ.







