‘ತಗ್ಲೈಫ್’ ಚಿತ್ರ ಪ್ರದರ್ಶನಕ್ಕೆ ರಕ್ಷಣೆ ಕೋರುವ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

PC : X
ಹೊಸದಿಲ್ಲಿ: ನಟ ಕಮಲ್ ಹಾಸನ್ರ ಚಿತ್ರ ‘ತಗ್ ಲೈಫ್’ನ ಪ್ರದರ್ಶನಕ್ಕೆ ರಕ್ಷಣೆ ಕೊಡಬೇಕು ಮತ್ತು ಈ ಮನವಿಯ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿ ಕರ್ನಾಟಕ ಥಿಯೇಟರ್ ಅಸೋಸಿಯೇಶನ್ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಕಮಲ ಹಾಸನ್ ಕನ್ನಡ ಭಾಷೆಯ ಬಗ್ಗೆ ನಕಾರಾತ್ಮವಾಗಿ ಮಾತನಾಡಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಚಿತ್ರದ ಬಿಡುಗಡೆಯಾಗಿಲ್ಲ.
ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠವೊಂದು ನಿರಾಕರಿಸಿತು. ಬದಲಿಗೆ, ಈ ವಿಷಯವನ್ನು ಮುಂದಿಟ್ಟುಕೊಂಡು ಹೈಕೋರ್ಟ್ಗೆ ಹೋಗುವಂತೆ ನ್ಯಾಯಪೀಠವು ಅರ್ಜಿದಾರರಿಗೆ ಸೂಚಿಸಿತು.
ಚಿತ್ರವನ್ನು ಪ್ರದರ್ಶಿಸಿದರೆ ಚಿತ್ರ ಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಕರ್ನಾಟಕದ ಕೆಲವು ಸಂಘಟನೆಗಳು ಬೆದರಿಕೆ ಹಾಕಿವೆ ಎಂಬುದಾಗಿ ಅರ್ಜಿದಾರರ ವಕೀಲರು ಹೇಳಿದಾಗ, ‘‘ಅಗ್ನಿಶಾಮಕ ಯಂತ್ರಗಳನ್ನು ಅಳವಡಿಸಿಕೊಳ್ಳಿ’’ ಎಂದು ನ್ಯಾಯಪೀಠ ಹೇಳಿತು.
ಮೇ 24ರಂದು ಚೆನ್ನೈನಲ್ಲಿ ನಡೆದ ‘ತಗ್ ಲೈಫ್’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕಮಲ ಹಾಸನ್ ನೀಡಿರುವ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿದೆ. ‘‘ಕನ್ನಡವು ತಮಿಳಿನಿಂದ ಹುಟ್ಟಿಕೊಂಡಿತು’’ ಎಂಬ ಅವರ ಹೇಳಿಕೆಗೆ ಕರ್ನಾಟಕದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಕಮಲ ಹಾಸನ್ ತನ್ನ ಹೇಳಿಕೆಗೆ ಕ್ಷಮೆ ಕೇಳದಿದ್ದರೆ, ರಾಜ್ಯದಲ್ಲಿ ‘ತಗ್ಲೈಫ್’ ಚಿತ್ರದ ಪ್ರದರ್ಶನವನ್ನು ನಿಷೇಧಿಸುವುದಾಗಿ ಕರ್ನಾಟಕ ಚಿತ್ರ ವಾಣಿಜ್ಯ ಸಂಸ್ಥೆ (ಕೆಎಫ್ಸಿಸಿ) ಘೋಷಿಸಿದೆ.
ಕರ್ನಾಟಕದಲ್ಲಿ ಚಿತ್ರದ ಪ್ರದರ್ಶನವನ್ನು ಮುಂದೂಡಲು ಕಮಲ ಹಾಸನ್ ಮತ್ತು ಅವರ ನಿರ್ಮಾಣ ಸಂಸ್ಥೆ ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಶನಲ್ ಸ್ವಯಂಪ್ರೇರಿತವಾಗಿ ನಿರ್ಧರಿಸಿದ್ದಾರೆ ಎಂಬುದಾಗಿ ಕಳೆದ ವಾರ ನಟನ ವಕೀಲರು ಕರ್ನಾಟಕ ಹೈಕೋರ್ಟ್ಗೆ ತಿಳಿಸಿದ್ದರು. ಕೆಫ್ಸಿಸಿಯೊಂದಿಗೆ ಮಾತುಕತೆ ನಡೆಸುವುದಾಗಿಯೂ ಅವರು ಹೇಳಿದ್ದರು. ತನ್ನ ಹೇಳಿಕೆಗೆ ಕ್ಷಮೆ ಕೋರುವಂತೆಯೂ ನ್ಯಾಯಾಲಯವು ನಟನಿಗೆ ಸಲಹೆ ನೀಡಿತ್ತು. ನೀವು ಖ್ಯಾತ ನಟನಾದರೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಹಕ್ಕಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
‘ತಗ್ ಲೈಫ್’ ದೇಶಾದ್ಯಂತದ ಚಿತ್ರಮಂದಿರಗಳಲ್ಲಿ ಜೂನ್ 5ರಂದು ಬಿಡುಗಡೆಗೊಂಡಿದೆ. ಚಿತ್ರವನ್ನು ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡಲಾಗಿದೆ.