ಜ.31 ಕ್ಕಿಂತ ಮೊದಲು ತೀರ್ಪು ಕಾಯ್ದಿರಿಸಿದ ಪ್ರಕರಣಗಳ ಕುರಿತು ಮಾಹಿತಿ ನೀಡಿ: ದೇಶದ ಎಲ್ಲಾ ಹೈಕೋರ್ಟ್ ಗಳಿಗೆ ಸುಪ್ರೀಂ ತಾಕೀತು

Photo credit: PTI
ಹೊಸದಿಲ್ಲಿ: ಜ.31 ಕ್ಕಿಂತ ಮೊದಲು ತೀರ್ಪು ಕಾಯ್ದಿರಿಸಿದ ಪ್ರಕರಣ ಗಳ ಕುರಿತು ಮಾಹಿತಿ ನೀಡುವಂತೆ ದೇಶದ ಎಲ್ಲಾ ಹೈಕೋರ್ಟ್ ಗಳಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಜನವರಿ 31, 2025 ರಂದು ಅಥವಾ ಅದಕ್ಕೂ ಮೊದಲು ತೀರ್ಪುಗಳನ್ನು ಕಾಯ್ದಿರಿಸಿದ್ದರೂ ಇನ್ನೂ ತೀರ್ಪು ನೀಡದ ಪ್ರಕರಣಗಳ ಕುರಿತು ವರದಿಯನ್ನು ಸಲ್ಲಿಸುವಂತೆ ಸೋಮವಾರ ಎಲ್ಲಾ ಹೈಕೋರ್ಟ್ಗಳ ರಿಜಿಸ್ಟ್ರಾರ್ ಜನರಲ್ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್ಕೆ ಸಿಂಗ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.
ತಮ್ಮ ಕ್ರಿಮಿನಲ್ ಮೇಲ್ಮನವಿಗಳ ಮೇಲಿನ ತೀರ್ಪುಗಳನ್ನು ಕಾಯ್ದಿರಿಸಲಾಗಿದ್ದರೂ, ಜಾರ್ಖಂಡ್ ಹೈಕೋರ್ಟ್ 2-3 ವರ್ಷಗಳು ಕಳೆದರೂ ತೀರ್ಪುಗಳನ್ನು ಪ್ರಕಟಿಸಿಲ್ಲ ಎಂದು ಆರೋಪಿಸಿ 4 ಅಪರಾಧಿಗಳು ಸಲ್ಲಿಸಿದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸುವಾಗ ಪೀಠವು ಈ ಆದೇಶವನ್ನು ನೀಡಿದೆ.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರ್ಜಿದಾರರ ಪರ ವಕೀಲೆ ಫೌಜಿಯಾ ಶಕೀಲ್, ಜಾರ್ಖಂಡ್ ಹೈಕೋರ್ಟ್ ಅನೇಕ ಕ್ರಿಮಿನಲ್ ಮೇಲ್ಮನವಿಗಳನ್ನು ಈ ಪ್ರಕರಣ ಬದಿಗಿಟ್ಟು ವಿಲೇವಾರಿ ಮಾಡಿದೆ. ಆದರೂ, ಅರ್ಜಿದಾರರ ಮೇಲ್ಮನವಿಗಳು ಇನ್ನೂ ಇತ್ಯರ್ಥವಾಗಬೇಕಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.







